ಜತ್(ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಸಲುವಾಗಿ ನೀರಾವರಿ ಯೋಜನೆಗಳ ಬಗ್ಗೆ ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಅಲ್ಲಿನ ಜನರಿಗೆ ಹಲವು ಆಶ್ವಾಸನೆಗಳನ್ನ ನೀಡುತ್ತಿದ್ದಾರೆ.
ಮೀರಜ್ ಜಿಲ್ಲೆಯ ಜತ್ನಲ್ಲಿ ಚುನಾವಣಾ ಪ್ರಚಾರ ನಡೆಸಿದ ವೇಳೆ ಯಡಿಯೂರಪ್ಪ ಅವರು ಮತದಾರರಿಗೆ ಈ ಭರವಸೆ ನೀಡಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅಧಿಕಾರಕ್ಕೆ ಬಂದ 15 ದಿನಗಳಲ್ಲೇ ಮಹದಾಯಿ ವಿವಾದಕ್ಕೆ ತೆರೆ ಎಳೆಯುವುದಾಗಿ ಭರವಸೆ ನೀಡಿದ್ದರು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದು 3 ತಿಂಗಳು ಕಳೆದರೂ ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಬಾಯ್ಬಿಟ್ಟಿಲ್ಲ.
ಇನ್ನು, ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವೆ ಈಗಾಗಲೇ ಭುಗಿಲೆದ್ದಿರುವ ಕೃಷ್ಣಾ ನದಿ ನೀರು ಹಂಚಿಕೆ ಪ್ರಕರಣವೇ ಇತ್ಯರ್ಥವಾಗಿಲ್ಲ. ಹೀಗಿರುವಾಗ ವೋಟಿಗಾಗಿ ಮಹಾ ಜನರ ವೋಲೈಕೆಯಲ್ಲಿ ಬಿಎಸ್ವೈ ತೊಡಗಿದ್ದಾರೆ. ಮಹದಾಯಿ ಹಾಗೂ ಕೃಷ್ಣಾ ನದಿ ನೀರು ಹಂಚಿಕೆ ವಿವಾದ ಹಸಿಯಾಗಿರುವ ಬೆನ್ನಲ್ಲೇ ಕರ್ನಾಟಕದ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಯ ನೀರನ್ನ ಮಹಾರಾಷ್ಟ್ರದ ಬೋರಾ ನದಿಗೆ ಹರಿಸಲು ಬಿಎಸ್ವೈ ಚಿಂತನೆ ನಡೆಸಿದ್ದಾರೆ. ರಾಜ್ಯದ ಜನರ ಹಿತಕ್ಕಿಂತ ಪಕ್ಷ ಮತ್ತು ಅವರ ಅಭ್ಯರ್ಥಿಗಳ ಗೆಲುವೇ ಬಿಎಸ್ವೈಗೆ ಮುಖ್ಯವಾಯ್ತಾ ಎಂಬ ಪ್ರಶ್ನೆಗಳು ರಾಜ್ಯದಲ್ಲಿ ವ್ಯಕ್ತವಾಗಿವೆ.