ಕೋಲ್ಕತ್ತಾ :ಪಶ್ಚಿಮ ಬಂಗಾಳದ ಪರಗಣ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಗಡಿ ದಾಟುತ್ತಿದ್ದಾಗ ಮೂವರು ಬಾಂಗ್ಲಾದೇಶದ ಪ್ರಜೆಗಳನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಗ್ದಾ ಪ್ರದೇಶದಲ್ಲಿ ಅಕ್ರಮವಾಗಿ ಭಾರತದೊಳಗೆ ನುಸುಳುತ್ತಿದ್ದ ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಿದ್ದಾರೆ. ಇವರಲ್ಲಿ ಇಬ್ಬರು ಮಹಿಳೆಯರೂ ಸೇರಿದ್ದಾರೆ.ಬಿಎಸ್ಎಫ್ ಗುಪ್ತಚರ ಶಾಖೆಯ ಯೋಧರು ಕೆಲಸ ಮಾಡುತ್ತಿದ್ದ ರಂಗಾಟ್ ಗಡಿ ಹೊರಠಾಣೆ ಕಂಪನಿಯ ಕಮಾಂಡರ್ ಸಂಭು ಬೈದ್ಯ ತಮ್ಮ ಸೈನಿಕರೊಂದಿಗೆ ಬಾಗ್ದಾ ಪ್ರದೇಶದಲ್ಲಿ ಗಡಿ ದಾಟಲು ಹೊಂಚು ಹಾಕುತ್ತಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಬಾಂಗ್ಲಾದೇಶಿಗಳನ್ನು ಬಂಧಿಸಿದ್ದಾರೆ.
ಬಾಂಗ್ಲಾದೇಶದ ಪ್ರಜೆಗಳು ಅಂತಾರಾಷ್ಟ್ರೀಯ ಗಡಿಯಿಂದ ರಂಗಾಟ್ ಗ್ರಾಮದ ಕಡೆಗೆ ಬರುತ್ತಿದ್ದರು ಎಂದು ಹೇಳಿದ್ದಾರೆ. ವಿಚಾರಣೆ ವೇಳೆ ಅವರು ಭಾರತೀಯ ವ್ಯಕ್ತಿಯೊಬ್ಬನ ಹೆಸರನ್ನು ಬಹಿರಂಗಪಡಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಬಂಧಿತ ಬಾಂಗ್ಲಾದೇಶಿಗಳಲ್ಲಿ ಇಬ್ಬರು ದಂಪತಿ ಎಂದು ಹೇಳಿಕೊಂಡಿದ್ದಾರೆ. ಅವರು ಉತ್ತರ ಪ್ರದೇಶಕ್ಕೆ ಕೆಲಸಕ್ಕೆ ತೆರಳುತ್ತಿದ್ದಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಂಧಿಸಲ್ಪಟ್ಟ ಮತ್ತೊಬ್ಬ ಮಹಿಳೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿರುವ ತನ್ನ ಪತಿಯನ್ನು ಸೇರಲು ಹೊರಟಿದ್ದೇನೆ ಎಂದು ಹೇಳಿದ್ದಾರೆ.
ಇನ್ನು ಮೂವರು ಬಾಂಗ್ಲಾದೇಶಿ ನಾಗರಿಕರು ಮತ್ತು ಭಾರತೀಯ ಪ್ರಜೆಯನ್ನು ಬಾಗ್ದಾ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.