ಶಿಮ್ಲಾ(ಹಿಮಾಚಲ ಪ್ರದೇಶ): ಶಿಮ್ಲಾ ಮಹಾನಗರ ಪಾಲಿಕೆಗೆ ಭೇಟಿ ನೀಡಿದ ಬ್ರಿಟಿಷ್ ದಂಪತಿ 106 ವರ್ಷ ಹಿಂದಿನ ತಮ್ಮ ತಾಯಿಯ ಜನನ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದಾರೆ.
ಬ್ರಿಟಿಷರ ಆಡಳಿತದ ಕಾಲದಲ್ಲಿ ಶಿಮ್ಲಾ, ಬೇಸಿಗೆ ರಾಜಧಾನಿಯಾಗಿತ್ತು. ಹೀಗಾಗಿ ಅವರಿಗೆ ಸಂಬಂಧಪಟ್ಟ ಕೆಲ ದಾಖಲೆಗಳು ಇಲ್ಲಿ ಲಭ್ಯವಿವೆ. ಪ್ರತೀ ವರ್ಷ ಇಂಗ್ಲೆಂಡ್ನ ಕೆಲ ಪ್ರಜೆಗಳು ಅವರ ಪೂರ್ವಜರ ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆಯಲು ಶಿಮ್ಲಾಗೆ ಆಗಮಿಸುತ್ತಿರುತ್ತಾರೆ.
ಅದರಂತೆ ಇಂಗ್ಲೆಂಡ್ನ ಸೌತಾಂಪ್ಟನ್ ಮೂಲದ ಜೂಲಿಯನ್ ಎಂಬಾಕೆ ತನ್ನ ತಾಯಿಯ ಜನನ ಪ್ರಮಾಣ ಪತ್ರ ಪಡೆಯಲು ಶಿಮ್ಲಾಗೆ ಆಗಮಿಸಿದ್ದರು. ವಿಶೇಷ ಅಂದರೆ ಅವರ ತಾಯಿ 106 ವರ್ಷಗಳ ಹಿಂದೆ ಶಿಮ್ಲಾದಲ್ಲಿ ಜನಿಸಿದ್ದರು. ಜೂಲಿಯನ್ ಅವರಿಂದ ಮಾಹಿತಿ ಪಡೆದ ಆರೋಗ್ಯ ಇಲಾಖೆ ಅಧಿಕಾರಿಗಳು 106 ವರ್ಷ ಹಿಂದಿನ ಕೈ ಬರಹದ ಜನನ ಪ್ರಮಾಣ ಪತ್ರವನ್ನ ನೀಡಿದ್ದಾರೆ.
ಜನನ ಪ್ರಮಾಣ ಪತ್ರದಲ್ಲಿರುವ ಮಾಹಿತಿ ಪ್ರಕಾರ ಜೂಲಿಯನ್ ತಾಯಿ 1914ರ ಸೆಪ್ಟೆಂಬರ್ 22 ರಂದು ಜನಿಸಿದ್ದರು. ಜೂಲಿಯನ್ ಅವರ ತಾತ ಕ್ಯಾಪ್ಟನ್ ಆಗಿದ್ದು, ಶಿಮ್ಲಾದಲ್ಲಿ ಒಂದು ಮನೆ ಹೊಂದಿದ್ದರು. ತಾಯಿ ಮತ್ತು ತಾತ ಶಿಮ್ಲಾದಲ್ಲಿ ಬಹಳ ಕಾಲ ವಾಸಿಸುತ್ತಿದ್ದರು ಎಂದು ಜೂಲಿಯನ್ ಹೇಳಿದ್ದಾರೆ. ತನ್ನ ತಾಯಿ ನೆನಪಿಗಾಗಿ ಈ ಪ್ರಮಾಣ ಪತ್ರವನ್ನು ಫ್ರೇಮ್ ಮಾಡಿಸಿ ಇಡುವುದಾಗಿ ಜೂಲಿಯನ್ ಹೇಳಿದ್ದಾರೆ.
ವಿಶೇಷ ಎಂದರೆ ಶಿಮ್ಲಾ ಮಹಾನಗರ ಪಾಲಿಕೆಯು 1870 ರಿಂದ ಇಲ್ಲಿಯವರೆಗೆ ಜನರಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಕಾಪಾಡಿಕೊಂಡು ಬಂದಿದೆ.