ನವದೆಹಲಿ : ದೇಶದಲ್ಲಿನ ಜನಸಂಖ್ಯೆ ಏರಿಕೆ ನಿಯಂತ್ರಿಸಲು ಸುಗ್ರೀವಾಜ್ಞೆ ತರಬೇಕೆಂದು ಬಿಜೆಪಿ ಮುಖಂಡ ಅಶ್ವಿನಿ ಉಪಾಧ್ಯಾಯ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
ಕುತೂಹಲಕಾರಿಯಾಗಿ ಚೀನಾದ ಉದಾಹರಣೆ ಉಲ್ಲೇಖಿಸಿದ ಅವರು, ಚೀನಾ ಸೂಪರ್ ಪವರ್ ಅಥವಾ ಮಹಾಶಕ್ತಿ ರಾಷ್ಟ್ರವಾಗಿದೆ. ಕಮ್ಯುನಿಸ್ಟ್ ದೇಶ ವಿಶ್ವದ ಅಗ್ರ ಸ್ಥಾನಕ್ಕೆ ಏರಲು ಜನಸಂಖ್ಯಾ ನಿಯಂತ್ರಣಕ್ಕೆ ಅದು ತೆಗೆದುಕೊಂಡ ಕ್ರಮಗಳಿಗೆ ಸಲ್ಲುತ್ತದೆ ಎಂದರು. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಸಂಸತ್ ಅಧಿವೇಶನ ನಡೆಸುವುದು ಕಷ್ಟ. ಆದ್ದರಿಂದ ಜನಸಂಖ್ಯೆಯ ಸ್ಫೋಟ ತಡೆಯಲು ಪರಿಣಾಮಕಾರಿಯಾದ ಜನಸಂಖ್ಯಾ ನಿಯಂತ್ರಣ ಸುಗ್ರೀವಾಜ್ಞೆ ತರಲು ನಿಮ್ಮನ್ನು ಕೋರಲಾಗಿದೆ.
ಕಾನೂನು ಬಲವಾಗಿ ಮತ್ತು ಪರಿಣಾಮಕಾರಿಯಾಗಿ ಇರಬೇಕು. ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ನಿಯಮ ಉಲ್ಲಂಘಿಸುವ ವ್ಯಕ್ತಿಗಳ ಖಾತೆ, ವಿದ್ಯುತ್ ಮತ್ತು ಮೊಬೈಲ್ ಸಂಪರ್ಕಗಳನ್ನು ರದ್ದುಗೊಳಿಸಬೇಕು ಅಥವಾ ಹಿಂತೆಗೆದುಕೊಳ್ಳಬೇಕು ಎಂದು ಬಿಜೆಪಿ ಮುಖಂಡರು ಅಂತಾರಾಷ್ಟ್ರೀಯ ಜನಸಂಖ್ಯಾ ದಿನಾಚರಣೆಯ ಸಂದರ್ಭದಲ್ಲಿ ಮೋದಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವುದು, ಚುನಾವಣೆಗಳಲ್ಲಿ ಸ್ಪರ್ಧಿಸುವುದು, ರಾಜಕೀಯ ಪಕ್ಷಗಳನ್ನು ರಚಿಸುವುದು ಮತ್ತು ಪಕ್ಷದ ಅಧಿಕಾರಿಗಳಾಗುವುದನ್ನು ಉಲ್ಲಂಘಿಸುವವರ ಮೇಲೆ ಜೀವಮಾನದ ನಿಷೇಧ ಹೇರುವಂತೆ ಉಪಾಧ್ಯಾಯ ಪ್ರತಿಪಾದಿಸಿದರು.
ನಿಯಮ ಮೀರುವ ಜನರಿಗೆ ಸರ್ಕಾರಿ ಶಾಲೆಗಳು ಮತ್ತು ಆಸ್ಪತ್ರೆ ಸೌಲಭ್ಯಗಳು ಸೇರಿ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ನಿರಾಕರಿಸಬೇಕು. 10 ವರ್ಷಗಳ ಕಾಲ ಜೈಲಿಗೆ ಕಳುಹಿಸಬೇಕು ಎಂದು ಹೇಳಿದ್ದಾರೆ.