ಬೆಂಗಳೂರು : ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ರೂಪಿಸಿದ್ದೇನೆ ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಚ್.ಎಸ್ ಸಚ್ಚಿದಾನಂದ ಮೂರ್ತಿ ಹೇಳಿದರು.
ನಗರದ ನೃಪತುಂಗ ರಸ್ತೆಯ ಬ್ರಾಹ್ಮಣ ಸಮುದಾಯದ ಅಭಿವೃದ್ಧಿ ಮಂಡಳಿ ಕಚೇರಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ, ಅದರಲ್ಲೂ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿಶೇಷ ಕಾಳಜಿವಹಿಸಿ 1 ವರ್ಷದ ಹಿಂದೆ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪಿಸಿ, ಅದಕ್ಕೆ ನನ್ನನ್ನು ಅಧ್ಯಕ್ಷನಾಗಿ ನೇಮಿಸಿದ್ದರು. ಬ್ರಾಹ್ಮಣ ಸಮುದಾಯದ ಯುವಕರಿಗೆ ವಧು ಸಿಗುತ್ತಿಲ್ಲ ಹಾಗೂ ಇನ್ನೊಂದೆಡೆ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಇದರ ಜೊತೆಗೆ ಸಾಕಷ್ಟು ಸಮಸ್ಯೆಗಳನ್ನು ಸಮುದಾಯದವರು ಎದುರಿಸುತ್ತಿದ್ದು, ಇವೆಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನಕ್ಕೆ ಮುಂದಾಗಿದ್ದೇನೆ. ಈ ಸಂಬಂಧ ಜನವರಿ 6 ರಂದು ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರನ್ನು ಅಭಿನಂದಿಸಿ, ಮುಂಬರುವ ದಿನಗಳಲ್ಲಿ ಮಂಡಳಿಯಿಂದ ಕೈಗೊಳ್ಳಲಿರುವ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದೇವೆ ಎಂದರು.
ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ, ಸಾಂದೀಪನಿ ಶಿಷ್ಯ ವೇತನ ಯೋಜನೆ, ಚಾಣಾಕ್ಯ ಆಡಳಿತ ತರಬೇತಿ ಯೋಜನೆ, ಪುರುಷೋತ್ತಮ ಯೋಜನೆ ಅನ್ನದಾತ ಯೋಜನೆ, ಮೈತ್ರೇಯಿ ಯೋಜನೆ, ಆಚಾರ್ಯತ್ರಯ ವೇದ ಶಿಷ್ಯ ವೇತನ ಯೋಜನೆ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಮುಖ್ಯಮಂತ್ರಿಗಳು ಅಂದು ಚಾಲನೆ ನೀಡಲಿದ್ದಾರೆ. ಮಂಡಳಿಯ ಯೋಜನೆಗಳಲ್ಲಿ ಒಂದಾದ ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ ಯೋಜನೆಯಡಿ 2019-20ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ತೇರ್ಗಡೆಯಾಗಿರುವ ಪ್ರತಿ ಜಿಲ್ಲೆಯ ಮೊದಲ ಮೂರು ಜನ ವಿದ್ಯಾರ್ಥಿಗಳಿಗೆ ಕ್ರಮವಾಗಿ 15 ಸಾವಿರ, 10 ಸಾವಿರ ಹಾಗೂ 5 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ರಾಜ್ಯದ ಒಟ್ಟು 168 ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು.
ಆಚಾರ್ಯತ್ರಯ ವೇದ ಶಿಷ್ಯ ವೇತನ ಯೋಜನೆಯಡಿಯಲ್ಲಿ ರಾಜ್ಯದಾದ್ಯಂತ ಅಖಿಲ ಕರ್ನಾಟಕ ಅರ್ಚಕರ ಮತ್ತು ಪುರೋಹಿತರ ಪರಿಷತ್ ಸಹಯೋಗದೊಂದಿಗೆ ದೇವತಾರ್ಚನಾ ಶಿಬಿರ ಕಾರ್ಯಕ್ರಮಕ್ಕೆ ಕಳೆದ ತಿಂಗಳು 17 ರಂದು ಚಾಲನೆ ನೀಡಲಾಗಿದ್ದು, ಇದು ಒಂದು ತಿಂಗಳ ಕಾಲ ತರಬೇತಿಯನ್ನು ನೀಡಲಾಗುತ್ತಿದ್ದು, ಈ ಯೋನೆಯಡಿಯಲ್ಲಿ ಸುಮಾರು 4,500 ಬ್ರಾಹ್ಮಣರು ನಿತ್ಯಾರ್ಚನೆ ಹಾಗೂ ಸಂಧ್ಯಾವಂದನೆ ತರಬೇತಿಯನ್ನು ಪಡೆಯುತ್ತಿರುತ್ತಾರೆ ಎಂದರು. ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಕೂಡ ಮಂಡಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಲ್ಲಿ ಕೋರಿದ್ದೇನೆ. ಇದಕ್ಕೆ ಅವರಿಂದ ಭರವಸೆ ಸಿಕ್ಕಿದೆ ಎಂದು ತಿಳಿಸಿದರು.