ಕೌಶಂಬಿ (ಉತ್ತರಪ್ರದೇಶ) : ಪ್ರಿಯಕರ ಮದುವೆಯಾಗಲು ನಿರಾಕರಿಸಿದ್ದಕ್ಕೆ ಮನನೊಂದು ಡಿಸೆಂಬರ್ 24ರಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಕೊನೆಯುಸಿರೆಳೆದಿದ್ದಾಳೆ.
ಘಟನೆ ವಿವರ : ಸೈನಿ ಪ್ರದೇಶದ ಯುವತಿ ಮತ್ತು ಅದೇ ಗ್ರಾಮದ ಯುವಕ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ಸಂದರ್ಭದಲ್ಲಿ ದೈಹಿಕ ಸಂಪರ್ಕ ಹೊಂದಿದ್ದು, ಆಕೆ ಗರ್ಭಿಣಿಯಾಗಿದ್ದಾಳೆ. ಬಳಿಕ ಆತ ಆಹಾರದಲ್ಲಿ ಔಷಧಿ ಬೆರೆಸಿ ಗರ್ಭಪಾತ ಮಾಡಿಸಿದ್ದನಂತೆ. ಈ ಹಿನ್ನೆಲೆ ಮದುವೆಯಾಗಲು ಒತ್ತಡ ಹೇರಿದ್ದಾಳೆ. ಯುವಕ ತನ್ನ ಅಕ್ಕ ಮದುವೆಯಾದ ನಂತರ ಮದುವೆಯ ಬಗ್ಗೆ ಪ್ರಸ್ತಾಪ ಮಾಡುವುದಾಗಿ ತಿಳಿಸಿದ್ದ.
ಆದರೆ, ಅಕ್ಕನ ವಿವಾಹವಾದರೂ ಸಹ ಆತ ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಾನೆ. ಈ ಸಂಬಂಧ ಮಾತುಕತೆ ನಡೆಸಲು ಇಬ್ಬರು ಊರಿನ ಬಳಿ ಇರುವ ಕಾಡಿಗೆ ತೆರಳಿದ್ದು, ಅಲ್ಲಿ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಈ ಸಂದರ್ಭದಲ್ಲಿ ಮದುವೆಗೆ ನಿರಾಕರಿಸಿದ್ದಲ್ಲದೆ, ತನಗೆ ಬೆಂಕಿ ಹಚ್ಚು ಎಂದು ಆತ ಹೇಳಿದ್ದಾನೆ.
ಇದರಿಂದ ಕೋಪಗೊಂಡ ಯುವತಿ ತನಗೆ ತಾನೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಬೆಂಕಿ ಉರಿಯುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಇದೀಗ ಆಕೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ.
ಇದನ್ನು ಓದಿ: ಮದುವೆಗೆ ನಿರಾಕರಿಸಿದ ಪ್ರಿಯಕರ : ಬೆಂಕಿ ಹಚ್ಚಿಕೊಂಡು ಯುವತಿ ಆತ್ಮಹತ್ಯೆಗೆ ಯತ್ನ
ಇನ್ನು ಪೊಲೀಸರು ಸಂತ್ರಸ್ತೆಯ ಹೇಳಿಕೆಗಳನ್ನು ದಾಖಲಿಸಿಕೊಂಡು, ಬಲವಂತವಾಗಿ ಗರ್ಭಪಾತ ಮತ್ತು ಅತ್ಯಾಚಾರ ಎಸಗಿರುವುದಾಗಿ ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಬಗ್ಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಮರ್ ಬಹದ್ದೂರ್ ಸಿಂಗ್ ಮಾತನಾಡಿದ್ದು, "ಯುವತಿ ಚಿಕಿತ್ಸೆಯ ಸಮಯದಲ್ಲಿ ಮೃತಪಟ್ಟಿದ್ದಾರೆ.
ಈ ಪ್ರಕರಣದಲ್ಲಿ ಕುಟುಂಬಗಳ ತಹ್ರಿರ್ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಮಹಿಳೆ ಮ್ಯಾಜಿಸ್ಟ್ರೇಟ್‌ಗೆ ನೀಡಿದ ಹೇಳಿಕೆಯ ಆಧಾರದ ಮೇಲೆ ಆರೋಪಿ ಯುವಕನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು" ಎಂದಿದ್ದಾರೆ.