ನವದೆಹಲಿ: ಲೋಕಸಭಾ ಚುನಾವಣೆಗೆ ವಿಭಿನ್ನವಾಗಿ ಪ್ರಚಾರ ನಡೆಸಲು ಮುಂದಾಗಿರುವ ಬಿಜೆಪಿ ರಾಷ್ಟ್ರ ರಾಜಧಾನಿಯಲ್ಲಿ ಡಿಜಿಟಲ್ ರಥಕ್ಕೆ ಎಪ್ರಿಲ್ 1ರಂದು ಚಾಲನೆ ನೀಡಲಿದೆ.
ಡಿಜಿಟಲ್ ರಥದಲ್ಲಿ ಪ್ರಧಾನಿ ಮೋದಿ ಸರ್ಕಾರ ಸಾಧನೆಗಳು ವಿಡಿಯೋ ತುಣುಕನ್ನು ಪ್ಲೇ ಮಾಡಲಾಗುತ್ತದೆ. ಜೊತೆಗೆ ಕೇಜ್ರಿವಾಲ್ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡುವ ಪ್ರಯತ್ನವನ್ನು ಡಿಜಿಟಲ್ ರಥದ ಮೂಲಕ ಮಾಡಲಾಗುತ್ತಿದೆ.
ಬಿಜೆಪಿಯ ಡಿಜಿಟಲ್ ರಥ ಸಂಪೂರ್ಣ ರಾಜಧಾನಿಯಲ್ಲಿ ತಿರುಗಾಟ ನಡೆಸಲಿದೆ. ಈ ರಥದಲ್ಲಿ ವೈಫೈ ಸಹ ಇರಲಿದ್ದು, 'ಕೇಜ್ರಿವಾಲ್ ಫೈಲ್ಡ್ ಟು ಗಿವ್ ಫ್ರೀ ವೈಫೈ' ಎನ್ನುವ ವೈಫೈ ಪಾಸ್ವರ್ಡ್ ಹೊಂದಿದೆ.
ಈ ವೈಫೈ ಅನ್ನು ಯಾರು ಬೇಕಾದರೂ ಬಳಸಬಹುದಾಗಿದೆ ಎಂದು ದೆಹಲಿ ಬಿಜೆಪಿಯ ಉಸ್ತುವಾರಿ ನೀಲಕಾಂತ್ ಬಕ್ಷಿ ಹೇಳಿದ್ದಾರೆ. ಏಕಕಾಲಕ್ಕೆ 200 ಮಂದಿ ವೈಫೈ ಬಳಸಬಹುದು ಎಂದು ಬಕ್ಷಿ ತಿಳಿಸಿದ್ದಾರೆ.