ಗಾಜಿಯಾಬಾದ್ (ಉತ್ತರ ಪ್ರದೇಶ): ಅಶೋಕ್ ಗೆಹ್ಲೋಟ್ ನೇತೃತ್ವದ ರಾಜಸ್ಥಾನ ಸರ್ಕಾರವನ್ನು ವಜಾಗೊಳಿಸುವಂತೆ ಬಿಜೆಪಿ ಶಾಸಕ ನಂದ್ ಕಿಶೋರ್ ಗುರ್ಜಾರ್ ಕೇಂದ್ರ ಗೃಹ ಸಚಿವ ಅಮಿತ್ ಷಾಗೆ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ತನ್ನ ಸರ್ಕಾರವನ್ನು ಭದ್ರಪಡಿಸಿಕೊಳ್ಳಲು ಕಾಂಗ್ರೆಸ್ ಶಾಸಕರನ್ನು ಅಪಹರಿಸಿದೆ ಎಂದು ನಂದ್ ಕಿಶೋರ್ ಆರೋಪಿಸಿದ್ದಾರೆ.
ನಂದ್ ಕಿಶೋರ್ ಗುರ್ಜಾರ್, ರಾಜಸ್ಥಾನದ ರಾಜ್ಯಪಾಲರಿಗೆ ಪತ್ರವೊಂದನ್ನು ಬರೆದಿದ್ದು, ಪ್ರಸ್ತುತ ಸರ್ಕಾರದಲ್ಲಿ ಬಹುಮತ ಇಲ್ಲದಿರುವುದರಿಂದ ಅಧಿಕಾರದಲ್ಲಿರಲು ಯಾವುದೇ ಹಕ್ಕಿಲ್ಲ. ಈ ಕಾರಣಕ್ಕಾಗಿ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಆದೇಶಿಸುವಂತೆ ಅವರು ರಾಜ್ಯಪಾಲರನ್ನ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ನ ಕೇಂದ್ರ ನಾಯಕತ್ವದ ವಿರುದ್ಧ ಯಾರಾದರೂ ಮಾತನಾಡಿದರೆ ಅವರ ರಾಜಕೀಯ ಜೀವನ ಕೊನೆಗಾಣುತ್ತದೆ ಎಂದು ಅವರು ಇದೇ ವೇಳೆ ಆರೋಪಿಸಿದ್ದಾರೆ.
ರಾಜ್ಯದ ಪ್ರಸ್ತುತ ರಾಜಕೀಯ ಬಿಕ್ಕಟ್ಟು ಉಲ್ಲೇಖಿಸಿ ಮಾತನಾಡಿದ ಗಾಜಿಯಾಬಾದ್‌ನ ಲೋನಿಯ ಬಿಜೆಪಿ ಶಾಸಕ, "ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುತ್ತಿರುವ ಸಚಿನ್ ಪೈಲಟ್ ಅವರಂತಹ ನಾಯಕರ ರಾಜಕೀಯ ಜೀವನವನ್ನು ಕಾಂಗ್ರೆಸ್ ಕೊನೆಗಾಣಿಸಬಹುದು" ಎಂದು ಹೇಳಿದರು.