ಮುಂಬೈ: ಇದೇ ತಿಂಗಳು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವ ಬಿಜೆಪಿ-ಶಿವಸೇನೆ ನಡುವೆ ಸೀಟು ಹಂಚಿಕೆ ಕಗ್ಗಂಟು ಕೊನೆಗೂ ಮುಕ್ತಾಯವಾಗಿದೆ.
ನಿನ್ನೆ ತಡರಾತ್ರಿಯವರೆಗೂ ನಡೆದ ಉಭಯ ಪಕ್ಷಗಳ ವರಿಷ್ಠರ ಸಭೆಯಲ್ಲಿ ಸೀಟು ಹಂಚಿಕೆ ಪ್ರಕ್ರಿಯೆ ಇತ್ಯರ್ಥಪಡಿಸಿಕೊಳ್ಳಲಾಗಿದೆ. ಒಟ್ಟು 288 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 162 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೇ ಶಿವಸೇನೆ 126 ಕ್ಷೇತ್ರಗಳಿಂದ ಕಣಕ್ಕಿಳಿಯಲಿದೆ.
ಬಿಜೆಪಿ ತಾನು ಪಡೆದ ಸೀಟುಗಳಲ್ಲಿ ಎನ್ಡಿಎ ಮೈತ್ರಿಕೂಟದ ಆರ್ಪಿಐ, ರಾಷ್ಟ್ರೀಯ ಸಮಾಜ ಪಕ್ಷ, ಶಿವ ಸಂಗ್ರಾಮ್ ಮತ್ತು ರಯತ್ ಕ್ರಾಂತಿ ಪಕ್ಷಗಳಿಗೆ ಕೆಲ ಕ್ಷೇತ್ರಗಳನ್ನು ಬಿಟ್ಟುಕೊಡಲಿದೆ. ಬಿಜೆಪಿ- ಶಿವಸೇನೆ 50:50 ಸೂತ್ರದಡಿ ಸೀಟು ಹಂಚಿಕೆ ಮಾಡಿಕೊಂಡಿವೆ. 2014ರ ಚುನಾವಣೆಯಲ್ಲಿ ಬಿಜೆಪಿ 122 ಹಾಗೂ ಸೇನೆ 63 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.
ರಾಜ್ಯದಲ್ಲಿ ಹೇಗಾದರೂ ಮಾಡಿ ಈ ಬಾರಿ ಅಧಿಕಾರಿಕ್ಕೆ ಬರಬೇಕೆಂದು ಹವಣಿಸುತ್ತಿರುವ ಕಾಂಗ್ರೆಸ್- ಎನ್ಸಿಪಿ ಮೈತ್ರಿಕೂಟ ಸಹ ತಲಾ 125 ಸ್ಥಾನಗಳಲ್ಲಿ ಸ್ಪರ್ಧಿಸುವ ಒಪ್ಪಂದ ಮಾಡಿಕೊಂಡಿವೆ. ಅಕ್ಟೋಬರ್ 21ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 24ರಂದು ಚುನಾವಣೆ ಫಲಿತಾಂಶ ಪ್ರಕಟಗೊಳ್ಳಲಿದೆ