ದೀದಿ ನಾಡಿನ ಮೇಲೆ ನಮೋ ಕಣ್ಣು... ದುರ್ಗಾ ಪೂಜೆ ವೇಳೆ ಬಂಗಾಳದಲ್ಲಿ ಬೃಹತ್ ರ‍್ಯಾಲಿ! - ಪಶ್ಚಿಮ ಬಂಗಾಳ ಎಲೆಕ್ಷನ್ 2021
ಮಮತಾ ಬ್ಯಾನರ್ಜಿ ನಾಡಿನ ಮೇಲೆ ಭಾರತೀಯ ಜನತಾ ಪಾರ್ಟಿ ಕಣ್ಣಿಟ್ಟಿದ್ದು, ಅದಕ್ಕಾಗಿ ದುರ್ಗಾ ಪೂಜೆ ವೇಳೆ ಮೋದಿ ನೇತೃತ್ವದಲ್ಲಿ ಬೃಹತ್ ರ‍್ಯಾಲಿ ಆಯೋಜನೆ ಮಾಡಲು ಕಮಲ ಪಡೆ ಯೋಜನೆ ಹಾಕಿಕೊಂಡಿದೆ.
ಕೋಲ್ಕತ್ತಾ: ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅದಕ್ಕಾಗಿ ಭಾರತೀಯ ಜನತಾ ಪಾರ್ಟಿ ಈಗಿನಿಂದಲೇ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿರುವ ಹಾಗೇ ಕಾಣಿಸುತ್ತಿದೆ.
ದೀದಿ ನಾಡು ಪಶ್ಚಿಮ ಬಂಗಾಳದಲ್ಲಿ ಕೇಸರಿ ಪಡೆ ಬಾವುಟ ಹಾರಿಸಲು ಸಜ್ಜಾಗಿರುವ ಭಾರತೀಯ ಜನತಾ ಪಾರ್ಟಿ ದುರ್ಗಾ ಪೂಜೆ ವೇಳೆ ಬೃಹತ್ ರ‍್ಯಾಲಿ ನಡೆಸಲು ಯೋಜನೆ ಹಾಕಿಕೊಂಡಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಪಶ್ಚಿಮ ಬಂಗಾಳ ಉಸ್ತುವಾರಿ ಕೈಲಾಸ್ ವಿಜಯವರ್ಗಿಯಾ ಮಾಹಿತಿ ನೀಡಿದ್ದಾರೆ.
ಭಾರತದ ಅತ್ಯಂತ ಭ್ರಷ್ಟ ಸರ್ಕಾರ ಪ. ಬಂಗಾಳದಲ್ಲಿ, ಧ್ವನಿ ಎತ್ತುವ ಯುವಕರ ಹತ್ಯೆ: ದೀದಿ ವಿರುದ್ಧ ತೇಜಸ್ವಿ ವಾಗ್ದಾಳಿ!
ಅಕ್ಟೋಬರ್ 22ರಂದು ಪಶ್ಚಿಮ ಬಂಗಾಳದಲ್ಲಿ ನಡೆಯುವ ಬೃಹತ್ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ ಎಂದಿದ್ದಾರೆ. ದುರ್ಗಾ ಪೂಜೆ ವೇಳೆ ಗೃಹ ಸಚಿವ ಅಮಿತ್ ಶಾ ಕೂಡ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಚುನಾವಣೆ ಸಿದ್ಧತೆ ಬಗ್ಗೆ ಪಕ್ಷದ ಸ್ಥಳೀಯ ಮುಖಂಡರೊಂದಿಗೆ ಅವರು ಮಾತುಕತೆ ನಡೆಸುವ ಸಾಧ್ಯತೆ ಇದೆ. ಪಶ್ಚಿಮ ಬಂಗಾಳದಲ್ಲಿ 2021ರ ಮೇ ವೇಳೆಗೆ ಚುನಾವಣೆ ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ 2011ರಿಂದಲೂ ಮಮತಾ ಬ್ಯಾನರ್ಜಿ ಆಡಳಿತ ಸರ್ಕಾರವಿದೆ.
ಕಳೆದ ವಾರ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ಆಯೋಜನೆ ಮಾಡಿತ್ತು. ಈ ವೇಳೆ ದೀದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲಾಗಿತ್ತು. ಕಳೆದ ಲೋಕಸಭೆ ಚುನಾವಣೆ ವೇಳೆ 42 ಕ್ಷೇತ್ರಗಳ ಪೈಕಿ ಬಿಜೆಪಿ 18 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ವಿಧಾನಸಭೆ ಚುನಾವಣೆಯಲ್ಲೂ ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿದೆ.