ನವದೆಹಲಿ: ಮಾನವೀಯತೆ, ಸಾಮಾಜಿಕ ಕಳಕಳಿಗೆ ಹೆಸರಾಗಿರುವ ಕ್ರಿಕೆಟರ್ ಗೌತಮ್ ಗಂಭೀರ್ ಈ ಹಿಂದಿನಿಂದಲೂ ತಮ್ಮ ಕೈಯಿಂದ ಆಗುವ ಸಹಾಯ ಮಾಡುತ್ತಲೇ ಬಂದಿದ್ದಾರೆ. ಸದ್ಯ ಪಾಕಿಸ್ತಾನದ ಮಗುವಿಗಾಗಿ ಮಾಜಿ ಕ್ರಿಕೆಟರ್ ಮನಸು ಕರಗಿದ್ದು, ಅವರಿಗೆ ಸಹಾಯ ಮಾಡಿದ್ದಾರೆ.
ಭಾರತ-ಪಾಕಿಸ್ತಾನದ ನಡುವೆ ಈ ಹಿಂದಿನಿಂದಲೂ ರಾಜಕೀಯ ಗುದ್ದಾಟ ನಡೆಯತ್ತಲೇ ಇದೆ. ಆದರೆ, ಇದೆಲ್ಲವನ್ನು ಬಂದಿಗಿಟ್ಟಿರುವ ಭಾರತ ಅನೇಕ ಸಲ ಮಾನವೀಯ ದೃಷ್ಠಿಯಿಂದ ನಡೆದುಕೊಂಡಿದೆ. ಸದ್ಯ ಗಂಭೀರ್ ಕೂಡ ಅದಕ್ಕೆ ಸೇರಿಕೊಂಡಿದ್ದಾರೆ.
ಪಾಕಿಸ್ತಾನದ ಹೆಣ್ಣು ಮಗು ಹೃದಯ ಶಸ್ತ್ರ ಚಿಕಿತ್ಸೆಗಾಗಿ ಭಾರತಕ್ಕೆ ಬರಬೇಕಾಗಿತ್ತು. ಆದರೆ, ಅವರಿಗೆ ಭಾರತದ ವೀಸಾ ಸಿಕ್ಕಿರಲಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟರ್ ಹಾಗೂ ಬಿಜೆಪಿ ಸಂಸದ ಗಂಭೀರ್ಗೆ ಟ್ವೀಟ್ ಮಾಡಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ತಕ್ಷಣವೇ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಂಸದ, ಭಾರತದ ವಿದೇಶಾಂಗ ಸಚಿವ ಜೈ ಶಂಕರ್ ಅವರಿಗೆ ಮಾಹಿತಿ ನೀಡಿದ್ದಾರೆ. ಜತೆಗೆ ಅವರಿಗೆ ವೀಸಾ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಇದೇ ವಿಷಯವನ್ನ ಪಾಕ್ನಲ್ಲಿರುವ ಭಾರತದ ರಾಯಭಾರಿ ಕಚೇರಿಗೆ ತಿಳಿಸಿರುವ ವಿದೇಶಾಂಗ ಸಚಿವರು, ತಕ್ಷಣವೇ ಅವರಿಗೆ ವೀಸಾ ನೀಡುವಂತೆ ತಿಳಿಸಿದ್ದಾರೆ. ಈಗಾಗಲೇ ಅವರಿಗೆ ವೀಸಾ ಲಭ್ಯವಾಗಿದ್ದು, ಹೆಣ್ಣು ಮಗು ಒಮೈಮಾ ಅಲಿ ಶಸ್ತ್ರ ಚಿಕಿತ್ಸೆಗಾಗಿ ಆಕೆಯ ಪೋಷಕರೊಂದಿಗೆ ಭಾರತಕ್ಕೆ ಆಗಮಿಸಲಿದ್ದಾರೆ. ಈ ಹಿಂದೆ ಕೂಡ ಭಾರತದ ವಿದೇಶಾಂಗ ಸಚಿವೆಯಾಗಿದ್ದ ದಿವಂಗತ ಸುಷ್ಮಾ ಸ್ವರಾಜ್ ಈ ರೀತಿಯ ಸಹಾಯ ಮಾಡಿ ಮಾನವೀಯತೆಯ ಪ್ರತೀಕವಾಗಿ ಗುರುತಿಸಿಕೊಂಡಿದ್ದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಗಂಭೀರ್, ನನಗೆ ಈ ಹಿಂದಿನಿಂದಲೂ ಪಾಕಿಸ್ತಾನ ಸರ್ಕಾರದ ಬಗ್ಗೆ ಸಿಟ್ಟಿದೆ. ಐಎಸ್ಐ ಹಾಗೂ ಉಗ್ರ ಸಂಘಟನೆಗಳಿಗೆ ಅವರು ಸಹಾಯ ಮಾಡುತ್ತಿವೆ. ಪಾಕಿಸ್ತಾನದ ಆರು ವರ್ಷದ ಬಾಲಕಿ ಭಾರತದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಾಳೆ ಎಂದರೆ ಅದಕ್ಕಿಂತಲೂ ಭಾರತದಲ್ಲಿ ಇನ್ನೇನು ಬೇಕು ಎಂದು ಪ್ರಶ್ನೆ ಮಾಡಿದ್ದಾರೆ.