ಗುಜರಾತ್: ಅಹಮದಾಬಾದ್‌ನ ನರೋಡಾ ವಿಧಾನಸಭಾ ಕ್ಷೇತ್ರದ ಶಾಸಕ ಬಲರಾಮ್ ಥವಾನಿ, ತನ್ನ ಬಳಿ ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ಕಾಲಿನಿಂದ ಒದ್ದು ಅಮಾನವೀಯವಾಗಿ ವರ್ತಿಸಿದ್ದಾರೆ.
ತಮ್ಮ ಕ್ಷೇತ್ರದಲ್ಲಿ ನೀರಿನ ಅಭಾವವಿದೆ ಎಂದು ಹೇಳಿಕೊಳ್ಳಲು ಬಂದಿದ್ದ ಎನ್ಸಿಪಿ ಪಕ್ಷದ ನಾಯಕಿ ನೀತು ತೇಜ್ವಾಗೆ ಪರಿಹಾರದ ಭರವಸೆ ನೀಡುವ ಬದಲು ಮನ ಬಂದಂತೆ ಥಳಿಸಿರುವ ವಿಡಿಯೋ ವೈರಲ್ ಆಗಿದೆ.
ಮಹಿಳೆ ಮತ್ತು ಶಾಸಕರ ನಡುವೆ ಮಾತಿಗೆ ಮಾತು ಬೆಳೆದಿದೆ. ಸಮಸ್ಯೆ ಬಗೆಹರಿಸದಿದ್ದರೆ ನಾನು ನಿಮ್ಮ ಕಚೇರಿ ಮುಂದೆ ಪ್ರತಿಭಟನೆಗೆ ಕುಳಿತುಕೊಳ್ಳುವುದಾಗಿ ಮಹಿಳೆ ಬೆದರಿಕೆ ಹಾಕಿದ್ದಾಳಂತೆ. ಇದರಿಂದ ಸಿಟ್ಟಿಗೆದ್ದ ಶಾಸಕರ ಬೆಂಬಲಿಗರು ಕಚೇರಿ ಹೊರಗೆ ಆಕೆಯನ್ನು ಥಳಿಸಿದ್ದಾರೆ. ಈ ವೇಳೆ ನೆಲಕ್ಕೆ ಬಿದ್ದಿದ್ದ ಆಕೆಗೆ ಶಾಸಕರು ಕೂಡ ಕಾಲಿನಿಂದ ಒದ್ದಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಶಾಸಕ, ತಾನು ಮಾಡಿದ್ದು ತಪ್ಪು ಎಂದು ಕ್ಷಮೆಯಾಚಿಸಿದ್ದಾರೆ. ಉದ್ದೇಶಪೂರ್ವಕವಾಗಿ ನಾನು ಆಕೆಯನ್ನ ಥಳಿಸಿಲ್ಲ. ನನ್ನ 22 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ನನಗೆ ನನ್ನ ತಪ್ಪಿನ ಅರಿವಾಗಿದೆ. ನಾನು ಆಕೆಯ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.