ಉತ್ತರ 24 ಪರಗಾನಾಸ್ (ಪಶ್ಚಿಮ ಬಂಗಾಳ): ಬಿಜೆಪಿ ಮುಖಂಡರಾದ ಮುಕುಲ್ ರಾಯ್ ಮತ್ತು ಸಮಿಕ್ ಭಟ್ಟಾಚಾರ್ಯರಿಗೆ ಸೇರಿದ ವಾಹನಗಳ ಮೇಲೆ ಅಪರಿಚಿತರು ದಾಳಿ ನಡೆಸಿದ ಘಟನೆ ಗುರುವಾರ ರಾತ್ರಿ ನಾಗ ಬಜಾರ್ ಪ್ರದೇಶದಲ್ಲಿ ನಡೆದಿದೆ.
ಸಮಿಕ್ ಭಟ್ಟಾಚಾರ್ಯ ಇಲ್ಲಿನ ದುಮ್ ದುಮ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ದಾಳಿ ನಡೆದ ಸಂದರ್ಭದಲ್ಲಿ ಮುಕುಲ್ ರಾಯ್ ಮತ್ತು ಸಮಿಕ್ ಭಟ್ಟಾಚಾರ್ಯ ಸ್ಥಳದಲ್ಲಿ ಇರಲಿಲ್ಲ. ಘಟನೆಯಲ್ಲಿ ಕಾರಿನ ಹಿಂದುಗಡೆಯ ಗಾಜು ಒಡೆಯಲಾಗಿದೆ.
ಇನ್ನು ಪಶ್ಚಿಮ ಬಂಗಾಳ ಲೋಕಸಭಾ ಚುನಾವಣೆ 7 ಹಂತಗಳಲ್ಲಿ ನಡೆಯುತ್ತಿದ್ದು, ಒಂದಿಲ್ಲೊಂದು ಹಿಂಸಾಚಾರ ಘಟನೆಗಳು ನಡೆಯುತ್ತಲ್ಲೇ ಇವೆ. ಈ ಹಿಂದೆ ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ಹಾಗೂ ಅಸ್ಸೋಂ ಸಚಿವ ಹೇಮಂತ್ ಬಿಸ್ವಾ ಶರ್ಮಾ ಮೇಲೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರಿಂದ ದಾಳಿ ನಡೆದಿರುವ ಆರೋಪ ಕೇಳಿಬಂದಿತ್ತು.
ಮೊನ್ನೆಯ ಕೋಲ್ಕತ್ತಾ ಹಿಂಸಾಚಾರದ ಹಿನ್ನೆಲೆಯಲ್ಲಿ ಕೆಲವೆಡೆ ಮೊನ್ನೆಯೇ ಬಹಿರಂಗ ಪ್ರಚಾರಕ್ಕೆ ತೆರೆ ಎಳೆಯಲು ಚುನಾವಣಾ ಆಯೋಗ ಆದೇಶ ನೀಡಿತ್ತು. ಮೇ 19ರಂದು ಪಶ್ಚಿಮ ಬಂಗಾಳದ 9 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.