ನವದೆಹಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೀಡಲಾದ ಕೋಟಾವನ್ನು (ಮೀಸಲಾತಿ) ಇನ್ನೂ 10 ವರ್ಷ ವಿಸ್ತರಿಸುವ ಎಸ್ಸಿ, ಎಸ್ಟಿ ಮಸೂದೆಯನ್ನು ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಲೋಕಸಭೆಯಲ್ಲಿ ಮಂಡಿಸಿದರು.
ಎಸ್ಸಿ, ಎಸ್ಟಿ ಸಮುದಾಯಗಳಿಗೆ ರಾಜಕೀಯ ಮೀಸಲಾತಿ ಅಗತ್ಯ ಎಂದು ಸಚಿವರು, ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಆಂಗ್ಲೋ-ಇಂಡಿಯನ್ ಸಮುದಾಯಕ್ಕೆ ನಾಮನಿರ್ದೇಶನದ ರೂಪದಲ್ಲಿ ನೀಡಲಾಗುವ ಮೀಸಲಾತಿಯನ್ನು ವಿಸ್ತರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ರು.
ಇದನ್ನೂ ಓದಿ: ಇನ್ನೂ 10 ವರ್ಷದವರೆಗೆ ಎಸ್ಸಿ/ಎಸ್ಟಿಗೆ ಮೀಸಲಾತಿ ಮುಂದುವರೆಸಲು ಮೋದಿ ಸರ್ಕಾರ ಸಜ್ಜು
ಸಂವಿಧಾನದ 334 ವಿಧಿಯ ಪ್ರಕಾರ, 70 ವರ್ಷಗಳಿಂದ ಎಸ್ಸಿ, ಎಸ್ಟಿ ಹಾಗೂ ಆಂಗ್ಲೋ-ಇಂಡಿಯನ್ ಸಮುದಾಯಕ್ಕೆ ನೀಡಿರುವ ಮೀಸಲಾತಿ 2020ರ ಜನವರಿ 25ಕ್ಕೆ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಮುಕ್ತಾಯವಾಗಲಿರುವ ಮೀಸಲಾತಿಯಲ್ಲಿ ಎಸ್ಸಿ, ಎಸ್ಟಿಗೆ ಮಾತ್ರ 2030ರ ಜನವರಿ 25ರವರೆಗೂ (10 ವರ್ಷ) ವಿಸ್ತರಿಸಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ.
ಆಂಗ್ಲೋ-ಇಂಡಿಯನ್ ಸಮುದಾಯವನ್ನು ಮಾತ್ರ ಏಕೆ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದರು. ಆಂಗ್ಲೋ-ಇಂಡಿಯನ್ನರಿಗೆ ಮೀಸಲಾತಿ ವಿಸ್ತರಿಸುವ ಬಗ್ಗೆ ಸರ್ಕಾರವೇನು ಬಾಗಿಲು ಮುಚ್ಚಿಲ್ಲ ಎಂದು ಪ್ರಸಾದ್ ತಿರುಗೇಟು ನೀಡಿದರು.
ಅಂಕಿ-ಸಂಖ್ಯೆ ಹೀಗಿದೆ?
ಸದ್ಯ ಸಂಸತ್ತಿನಲ್ಲಿ 84 ಪರಿಶಿಷ್ಟ ಜಾತಿ ಮತ್ತು 47 ಮಂದಿ ಪರಿಶಿಷ್ಟ ಪಂಗಡದ ಸದಸ್ಯರಿದ್ದಾರೆ. ರಾಜ್ಯಗಳಲ್ಲಿರುವ ಶಾಸನ ಸಭೆಯಲ್ಲಿ ಒಟ್ಟು 614 ಮಂದಿ ಪರಿಶಿಷ್ಟ ಜಾತಿಯವರು, 554 ಮಂದಿ ಪರಿಶಿಷ್ಟ ಪಂಗಡದ ಸದಸ್ಯರಿದ್ದಾರೆ. ಆಂಗ್ಲೋ-ಇಂಡಿಯನ್ ಸಮುದಾಯದ 296 ಸದಸ್ಯರಿದ್ದು, ಅದರಲ್ಲಿ ಕೇರಳದವರೇ 124 ಮಂದಿ ಇದ್ದಾರೆ.