ಪಾಟ್ನಾ: ಇಂದು ಬಿಹಾರ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಫಲಿತಾಂಶ ಹೊರಬೀಳಲಿದ್ದು, ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದೆ. ಈ ಮಧ್ಯೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಮಹಿಳಾ ಮತದಾರರ ಬಲದಿಂದ ಮತ್ತೆ ಮರು ಆಯ್ಕೆ ಆಗುತ್ತಾರೋ ಅಥವಾ ತೇಜಸ್ವಿ ಯಾದವ್ ಸರ್ಕಾರ ರಚಿಸುತ್ತಾರೋ ಎಂಬ ಕುತೂಹಲ ಹೆಚ್ಚಾಗಿದೆ.
ಚುನಾವಣೋತ್ತರ ಸಮೀಕ್ಷೆಗಳು ನಿಜವಾದರೆ, ಮಹಾಘಟಬಂಧನ್ ಬಿಹಾರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದರೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಸಿಎಂ ಹುದ್ದೆ ಅಲಂಕರಿಸಿದ ಅತ್ಯಂತ ಕಿರಿಯ ಮುಖ್ಯಮಂತ್ರಿಯಾಗಲಿದ್ದಾರೆ.
ಬಿಹಾರ ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಒಟ್ಟಾರೆ ಶೇ 57.05 ರಷ್ಟು ಮತದಾನವಾಗಿದ್ದು, ಇದು 2015 ರಲ್ಲಿ ಶೇ 56.66 ಕ್ಕೆ ಹೋಲಿಸಿದರೆ 0.39 ರಷ್ಟು ಹೆಚ್ಚಾಗಿದೆ. ಆದರೆ ಮಹಿಳಾ ಮತದಾರರ ಸಂಖ್ಯೆ ಶೇ 59.7 ರಷ್ಟಿದ್ದು, ಈ ಬಾರಿ ಮಹಿಳೆಯರ ಮತದಾನ ಪ್ರಮಾಣ ಹೆಚ್ಚಾಗಿದೆ.
ದಕ್ಷಿಣ ಬಿಹಾರದ 16 ಜಿಲ್ಲೆಗಳನ್ನು ಒಳಗೊಂಡ 71 ಸ್ಥಾನಗಳ ಮೊದಲ ಹಂತದ ಮತದಾನದಲ್ಲಿ ಪುರುಷರ ಮತದಾನ ಪ್ರಮಾಣ 56.83 ರಷ್ಟಿದ್ದು, ಮಹಿಳೆಯರ ಮತದಾನ ಪ್ರಮಾಣ 54.41ರಷ್ಟಿದೆ. ಎರಡನೇ ಹಂತದ ಮತದಾನದಲ್ಲಿ, ನವೆಂಬರ್ 3 ರಂದು 17 ಜಿಲ್ಲೆಗಳಲ್ಲಿ 94 ಸ್ಥಾನಗಳಲ್ಲಿ ಮಹಿಳಾ ಮತದಾನ ಪ್ರಮಾಣ ಹೆಚ್ಚಾಗಿದೆ. 58.80 ರಷ್ಟು ಮಹಿಳೆಯರು, 52.92 ರಷ್ಟು ಪುರುಷರು ಮತ ಚಲಾಯಿಸಿದ್ದಾರೆ. ಅದೇ ರೀತಿ, ಮೂರನೇ ಹಂತದಲ್ಲಿ ಮಹಿಳಾ ಮತದಾನ ಪ್ರಮಾಣ ಶೇಕಡಾ 65.54 ರಷ್ಟಿದೆ.
ನಿತೀಶ್ ಕುಮಾರ್ ತಮ್ಮ ಸಾರ್ವಜನಿಕ ಸಭೆಗಳಲ್ಲಿ ತಮ್ಮ ಸರ್ಕಾರವು ವಿದ್ಯಾರ್ಥಿನಿಯರಿಗೆ ಪ್ರಾರಂಭಿಸಿದ ಯೋಜನೆಗಳ ಬಗ್ಗೆ ಒತ್ತಿ ಹೇಳಿದ್ದಾರೆ. ಇದರಲ್ಲಿ ಹೆಚ್ಚು ಪ್ರಚಾರ ಪಡೆದ ಬೈಸಿಕಲ್ ಯೋಜನೆ, 55,000 ರೂ.ಗಳ ಅನುದಾನ ಮತ್ತು ಪದವಿ ತನಕ ಇತರ ಸೌಲಭ್ಯಗಳು ಮತ್ತು ಪಂಚಾಯತ್ ಮಟ್ಟದಲ್ಲಿ ಮಹಿಳೆಯರಿಗೆ 50 ಪ್ರತಿಶತ ಮೀಸಲಾತಿ ಮತ್ತು ಶೇ 35 ಸರ್ಕಾರಿ ಉದ್ಯೋಗಗಳಲ್ಲಿ ಅವರಿಗೆ ಕೋಟಾ ನೀಡುವ ಯೋಜನೆಗಳು ಮಹಿಳೆಯರನ್ನು ಹೆಚ್ಚು ಆಕರ್ಷಿಸುವ ಸಾಧ್ಯತೆಗಳಿದ್ದು, ಮಹಿಳಾ ಮತದಾರ ಬಲದಿಂದ ನಿತೀಶ್ ಕುಮಾರ್ ಮತ್ತೆ ಸಿಎಂ ಗಾದಿ ಏರುತ್ತಾರಾ ಎಂಬ ಕುತೂಹಲವೂ ಹೆಚ್ಚಾಗಿದೆ.
ಆದರೆ, ಈ ಮಧ್ಯೆ ಹಲವು ಸಮೀಕ್ಷೆಗಳು, ಬಿಹಾರ ಮತದಾರ ಈ ಬಾರಿಯೂ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡುವುದಿಲ್ಲ. ಇದರಿಂದ ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ಅತಿ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ.
ಜನತಾದಳ-ಯುನೈಟೆಡ್ (ಜೆಡಿಯು) ಮುಖ್ಯಸ್ಥರು ಕಳೆದ ಕೆಲವು ವರ್ಷಗಳಿಂದ ವಿದ್ಯಾವಂತ ಬಾಲಕಿಯರ ಪ್ರಮಾಣ ಹೇಗೆ ಕಡಿಮೆಯಾಗಿದೆ ಎಂಬುದನ್ನು ಎತ್ತಿ ತೋರಿಸಿದರು. 2015 ರಲ್ಲಿ ರಾಜ್ಯವ್ಯಾಪಿ ಮದ್ಯ ನಿಷೇಧವನ್ನು ಜಾರಿಗೆ ತರುವ ಭರವಸೆಯ ಮೇರೆಗೆ ನಿತೀಶ್ ಕುಮಾರ್ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಏರಿದರು. ಅವರು ಮುಖ್ಯಮಂತ್ರಿಯಾದ ನಂತರ, ಮಹಿಳಾ ಮತದಾರರಿಗೆ ನೀಡಿದ ಭರವಸೆಯನ್ನು ಈಡೇರಿಸಿದರು ಮತ್ತು ಔಪಚಾರಿಕವಾಗಿ ಬಿಹಾರ ಅಬಕಾರಿ (ತಿದ್ದುಪಡಿ) ಕಾಯ್ದೆ 2016 ಅನ್ನು ಪರಿಚಯಿಸಿದರು. 2011 ರ ಜನಗಣತಿಯಲ್ಲಿ ಪ್ರತಿ 1,000 ಪುರುಷರಿಗೆ 918 ಮಹಿಳೆಯರನ್ನು ಹೊಂದಿರುವ ಬಿಹಾರವು ತನ್ನ ಜನಸಂಖ್ಯೆಯಲ್ಲಿ ಪ್ರತಿಕೂಲವಾದ ಲಿಂಗ ಅನುಪಾತವನ್ನು ಹೊಂದಿದೆ.
ಆಶ್ಚರ್ಯಕರ ಸಂಗತಿಯೆಂದರೆ, ಮಹಿಳೆಯರ ಮತದಾನದ ಶೇಕಡಾ 42 ರಿಂದ 60 ರವರೆಗೆ ಸುಧಾರಿಸಿದೆ. ಒಟ್ಟಿನಲ್ಲಿ ಇಂದು ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ಮತದಾರರು ಯಾರ ಕೊರಳಿಗೆ ವಿಜಯದ ಮಾಲೆ ಹಾಕಿದ್ದಾರೆ ಎಂಬುದನ್ನು ಗೊತ್ತಾಗಲಿದೆ.