ನವದೆಹಲಿ: ಮೊದಲ ಹಂತದ ಬಿಹಾರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಇಂದು ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.
ಭಾನುವಾರ ಸಭೆ ಸೇರಿದ್ದ ಬಿಹಾರದ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ, ಮುಂಬರುವ ಚುನಾವಣೆಗೆ ಸಂಭವನೀಯ ಅಭ್ಯರ್ಥಿಗಳ ಹೆಸರನ್ನು ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ. ಅವಿನಾಶ್ ಪಾಂಡೆ ನೇತೃತ್ವದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ, ಬಿಹಾರ ಕಾಂಗ್ರೆಸ್ ಉಸ್ತುವಾರಿ ಶಕ್ತಿ ಸಿನ್ಹಾ ಗೋಹಿಲ್, ಬಿಹಾರ ಕಾಂಗ್ರೆಸ್ ಮುಖ್ಯಸ್ಥ ಮದನ್ ಮೋಹನ್ ಝಾ ಮತ್ತು ಸಿಎಲ್‌ಪಿ ಮುಖಂಡ ಸದಾನಂದ್ ಸಿಂಗ್ ಇತರರು ಭಾಗವಹಿಸಿದ್ದರು.
ಸೋನಿಯಾ ಗಾಂಧಿ ನೇತೃತ್ವದ ಕೇಂದ್ರ ಚುನಾವಣಾ ಸಮಿತಿ ಇಂದು ಸಭೆ ಸೇರಿ ಸ್ಕ್ರೀನಿಂಗ್ ಪ್ಯಾನಲ್ ಶಿಫಾರಸು ಮಾಡುವ ಕೆಲವು ಅಭ್ಯರ್ಥಿಗಳನ್ನು ಅಂತಿಮಗೊಳಿಸುತ್ತದೆ.
ಭಾನುವಾರ ಸಭೆ ಸೇರಿದ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ (ಸಿಇಸಿ), ಯಾರು ಯಾವ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದನ್ನು ಚರ್ಚೆ ನಡೆಸಿದ್ದು, ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಬಹುತೇಕ ಎಲ್ಲಾ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ತಡರಾತ್ರಿ ಸಭೆ ಮುಕ್ತಾಯಗೊಳಿಸಿದೆ.
50ಕ್ಕೂ ಹೆಚ್ಚು ಹೆಸರುಗಳನ್ನು ಹೊಂದಿರುವ ಈ ಪಟ್ಟಿಯನ್ನು ಇಂದು ಪ್ರಕಟಿಸುವ ನಿರೀಕ್ಷೆಯಿದೆ. ಸಿಇಸಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮುಂತಾದವರು ಭಾಗವಹಿಸಿದ್ದರು.
ಇಂದು ಬೆಳಗ್ಗೆ 9 ಗಂಟೆಗೆ ಬಿಜೆಪಿಯ ಕೇಂದ್ರ ಮತ್ತು ರಾಜ್ಯ ನಾಯಕರ ನಡುವೆ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.