ಪಾಟ್ನಾ: ಬಿಹಾರದಲ್ಲಿ ಈಗಾಗಲೇ ಚುನಾವಣೆ ಘೋಷಣೆಯಾಗಿದ್ದು, 243 ಮತ ಕ್ಷೇತ್ರಗಳ ಅಸೆಂಬ್ಲಿ ಚುನಾವಣೆಗೆ ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ಅಕ್ಟೋಬರ್ 28, ನವೆಂಬರ್ 3 ಹಾಗೂ 7ರಂದು ವೋಟಿಂಗ್ ನಿಗದಿಯಾಗಿದೆ. ಇದರ ಫಲಿತಾಂಶ ನವೆಂಬರ್ 10ರಂದು ಹೊರಬೀಳಲಿದೆ.
ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಈಗಾಗಲೇ ಕಾಂಗ್ರೆಸ್, ಆರ್ಜೆಡಿ ಹಾಗೂ ಇತರ ಪಕ್ಷಗಳು ಸೇರಿ ಮೈತ್ರಿ ಮಾಡಿಕೊಂಡು ಸ್ಪರ್ಧೆ ಎದುರಿಸಲು ನಿರ್ಧರಿಸಿವೆ. ಇದರ ಬೆನ್ನಲ್ಲೇ ಇದೀಗ ಜೆಡಿಯು ಹಾಗೂ ಬಿಜೆಪಿ ನಡುವೆ ಚುನಾವಣೆ ಎದುರಿಸಲು ಮೈತ್ರಿ ಮಾಡಿಕೊಂಡಿದ್ದು, 122 ಕ್ಷೇತ್ರಗಳಲ್ಲಿ ಜೆಡಿಯು ಹಾಗೂ 121 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ ಮಾಡಲಿದೆ.
ನಿತೀಶ್ ಕುಮಾರ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಆದರೆ, ಮೈತ್ರಿಯಿಂದ ಚಿರಾಗ್ ಪಾಸ್ವಾನ್ ಹೊರ ನಡೆದಿದ್ದಾರೆ. ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ ಏಕಾಂಗಿಯಾಗಿಯೇ ಚುನಾವಣೆ ಎದುರಿಸುವ ಸಾಧ್ಯತೆಗಳಿವೆ. ಇದೇ ವಿಚಾರವಾಗಿ ಬಿಜೆಪಿ - ಜೆಡಿಯು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
2015ರಲ್ಲಿ ಜೆಡಿಯು, ಆರ್ಜೆಡಿ ಹಾಗೂ ಕಾಂಗ್ರೆಸ್ ಒಟ್ಟಾಗಿ ಚುನಾವಣೆ ಎದುರಿಸಿದ್ದವು. ಆದರೆ, ಬಿಜೆಪಿ ಎಲ್ಜೆಪಿ ಜೊತೆ ಕೈಜೋಡಿಸಿ ಚುನಾವಣೆ ಎದುರಿಸಿತ್ತು. ಆರ್ಜೆಡಿ 80 ಸ್ಥಾನ, ಜೆಡಿಯು 71 ಹಾಗೂ ಬಿಜೆಪಿ 53 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿತ್ತು. ಇನ್ನು 2017ರಲ್ಲಿ ಎನ್ಡಿಎ ಜತೆ ಕೈಜೋಡಿಸಿದ ನಿತೀಶ್ ಕುಮಾರ್ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಸರ್ಕಾರದ ಹೊಣೆ ಹೊತ್ತಿದ್ದಾರೆ.