ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ವಿಧಿಸಿದ್ದ ಒಂದು ರೂಪಾಯಿ ದಂಡ ಪಾವತಿಸಿದ್ದ ವಕೀಲ ಪ್ರಶಾಂತ್ ಭೂಷಣ್ ಇದೀಗ ನ್ಯಾಯಾಲಯದ ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಟ್ವೀಟ್ ಮಾಡಿದ್ದ ಪ್ರಶಾಂತ್ ಭೂಷಣ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿತ್ತು. ವಿಚಾರಣೆಯಲ್ಲಿ ಭೂಷಣ್ ದೋಷಿ ಎಂಬುದು ಸಾಬೀತಾಗಿತ್ತು.
ತಮ್ಮ ತಪ್ಪಿಗೆ ಕ್ಷಮೆ ಕೇಳುವಂತೆ ಭೂಷಣ್ಗೆ ಸೂಚಿಸಿದ್ದ ನ್ಯಾಯಾಲಯ, ಇದಕ್ಕೆ ಕಾಲಾವಕಾಶ ನೀಡಿತ್ತು. ಆದರೆ ಕ್ಷಮೆಯಾಚಿಸುವುದಕ್ಕೆ ಪ್ರಶಾಂತ್ ಭೂಷಣ್ ನಿರಾಕರಿಸಿದ್ದರು. ಹೀಗಾಗಿ ಒಂದು ರೂ. ದಂಡ ವಿಧಿಸಿ ಸುಪ್ರೀಂ ಕೋರ್ಟ್ ಆಗಸ್ಟ್ 31ರಂದು ಮಹತ್ವದ ತೀರ್ಪು ನೀಡಿತ್ತು. ಸೆ. 15ರ ಒಳಗಡೆ ದಂಡ ಕಟ್ಟದಿದ್ದರೆ ಮೂರು ವರ್ಷಗಳ ಕಾಲ ವಕೀಲ ವೃತ್ತಿ ಮಾಡುವಂತಿಲ್ಲ ಹಾಗೂ ಮೂರು ತಿಂಗಳ ಕಾಲ ಜೈಲುವಾಸ ಅನುಭವಿಸಬೇಕು ಎಂದು ಕೂಡ ಸೂಚಿಸಿತ್ತು.
ದಂಡ ಕಟ್ಟಲು ಒಪ್ಪಿಕೊಂಡಿದ್ದ ಪ್ರಶಾಂತ್ ಭೂಷಣ್, ಸೆ.14ರಂದು ಒಂದು ರೂಪಾಯಿ ದಂಡ ಪಾವತಿಸಿದ್ದರು. "ದಂಡ ಪಾವತಿಸಿದ್ದರಿಂದ ಸುಪ್ರೀಂಕೋರ್ಟ್ ತೀರ್ಪನ್ನು ಒಪ್ಪಿಕೊಂಡಿದ್ದೇನೆ ಎಂದು ತಿಳಿದುಕೊಳ್ಳಬಾರದು. ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸುತ್ತೇನೆ" ಎಂದು ಭೂಷಣ್ ಹೇಳಿದ್ದರು. ಇದರಂತೆ ಇಂದು ನ್ಯಾಯಾಲಯದ ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ.