ಕೋಟಾ : ದೇಶದಾದ್ಯಂತ ಪರಿಸರ ಪರ ಹೋರಾಟಗಳು ನಿರಂತರವಾಗಿ ನಡೆಯುತ್ತಲೇ ಇವೆ. ಆದರೆ, ಒಂದಲ್ಲ ಒಂದು ರೀತಿ ಪರಿಸರ ನಾಶ ನಮ್ಮಿಂದಲೇ ಆಗುತ್ತಿದೆ. ಕೈಗಾರಿಕೆಗಳ ಸ್ಥಾಪನೆ, ರಸ್ತೆ ನಿರ್ಮಾಣ ಸೇರಿ ವಿವಿಧ ಅಭಿವೃದ್ದಿ ಕಾಮಗಾರಿಗಳ ನೆಪದಲ್ಲಿ ನಮ್ಮ ಆಡಳಿತ ವರ್ಗವೇ ಪರಿಸರ ನಾಶಕ್ಕೆ ಕಾರಣವಾಗುತ್ತಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾದ 'ಭಾರತ್ ಮಾಲಾ' ರಾಜಸ್ಥಾನದ ಕೋಟಾ ಹುಲಿ ಸಂರಕ್ಷಿತ ಅರಣ್ಯದ ಲಕ್ಷಾಂತರ ಮರಗಳನ್ನು ಕಡಿಯುವ ಅನಿವಾರ್ಯತೆ ಎದುರಾಗಿದೆ. ಆದರೆ, ಇದಕ್ಕಾಗಿ ಹೆದ್ದಾರಿ ಪ್ರಾಧಿಕಾರ ಪರ್ಯಾಯ ಮಾರ್ಗ ಕಂಡು ಹಿಡಿದಿದೆ.
ಮುಂಬೈನಿಂದ ದೆಹಲಿಗೆ ಎಕ್ಸ್ಪ್ರೆಸ್ ವೇ ನಿರ್ಮಾಣ ಮಾಡುವ ಪ್ರಧಾನ ಮಂತ್ರಿಗಳ ಕನಸಿನ ಯೋಜನೆ ಭಾರತ್ ಮಾಲಾ ರಾಜಸ್ಥಾನದ ಕೋಟಾದ ಮುಕುಂದ್ರ ಹಿಲ್ಸ್ ಹುಲಿ ಸಂರಕ್ಷಿತಾರಣ್ಯದ ಮಧ್ಯದಲ್ಲಿ ಹಾದು ಹೋಗುತ್ತದೆ. ಸುಮಾರು 7 ಕಿ.ಮೀ ರಸ್ತೆ ನಿರ್ಮಾಣಕ್ಕಾಗಿ ಅರಣ್ಯ ಪ್ರದೇಶದ ಸುಮಾರು 2.5 ಲಕ್ಷ ಮರಗಳನ್ನು ಕತ್ತರಿಸುವ ಅನಿವಾರ್ಯತೆ ಎದುರಾಗಿತ್ತು. ಆದರೆ, ಇದಕ್ಕೆ ಪರ್ಯಾಯ ಮಾರ್ಗ ಕಂಡು ಕೊಂಡಿರುವ ಅರಣ್ಯ ಇಲಾಖೆ ಮತ್ತು ಹೆದ್ದಾರಿ ಪ್ರಾಧಿಕಾರ 1,500 ಕೋಟಿ ರೂ. ವೆಚ್ಚದಲ್ಲಿ ಮುಕುಂದ್ರ ಹಿಲ್ಸ್ ಅರಣ್ಯ ಪ್ರದೇಶದಲ್ಲಿ ಸುರಂಗ ಮಾರ್ಗ ನಿರ್ಮಾಣ ಮಾಡಲು ಯೋಜನೆ ರೂಪಿಸಿದೆ. ಇದರಿಂದ ಲಕ್ಷಾಂತರ ಮರಗಳ ಮಾರಣ ಹೋಮ ತಪ್ಪಲಿದೆ.
ಭಾರತ್ ಮಾಲಾ ಯೋಜನೆ ಎಂದರೇನು?: ದೇಶದ ಆರ್ಥಿಕ ಗತಿಯನ್ನು ಇನ್ನಷ್ಟು ವೇಗಗೊಳಿಸುವ ಸಲುವಾಗಿ ದೇಶದ ಗಡಿ ಮತ್ತು ಕರಾವಳಿ ಪ್ರದೇಶಗಳನ್ನು ರಾಷ್ಟ್ರೀಯ ಹೆದ್ದಾರಿಗಳೊಂದಿಗೆ ಜೋಡಿಸಲು ನಿರ್ಧರಿಸಲಾಗಿದೆ. ಈ ಯೋಜನೆಗೆ ಸರ್ಕಾರ ಭಾರತ್ ಮಾಲಾ ಎಂದು ಹೆಸರಿಟ್ಟಿದೆ. ಯೋಜನೆಯನ್ನು 7 ಹಂತಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಿದೆ. ಇದರಡಿ ದೇಶಾದ್ಯಂತ ಒಟ್ಟು 34,800 ಕಿ.ಮೀ ರಸ್ತೆಗಳನ್ನು ನಿರ್ಮಿಸಲಾಗುವುದು. ಈ ಯೋಜನೆಗಾಗಿ ಒಟ್ಟು 5,35,000 ಕೋಟಿ ರೂ. ವ್ಯಯಿಸಲಾಗುತ್ತದೆ.