ಬೆಂಗಳೂರು: ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಸೇರಿ ವಿವಿಧ ಕಾಯ್ದೆಗಳಿಗೆ ಸುಗ್ರೀವಾಜ್ಞೆ ತಂದಿರುವುದನ್ನು ವಿರೋಧಿಸಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿಯು ಇಂದು ಭಾರತ್ ಬಂದ್ಗೆ ಕರೆ ಕೊಟ್ಟಿದೆ.
ಕೊರೊನಾ ಸಂದರ್ಭವನ್ನೇ ದುರ್ಬಳಕೆ ಮಾಡಿಕೊಂಡು ರಾಜ್ಯ ಸರ್ಕಾರ ಕರ್ನಾಟಕ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆಗಳಿಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡಿರುವುದು ಸಮಂಜಸವಲ್ಲ. ಕಾಯ್ದೆಗೆ ತಿದ್ದುಪಡಿ ಮಾಡಬೇಕಾದ್ರೆ ವಿಧಾನಸಭಾ ಅಧಿವೇಶನನಲ್ಲಿ ಚರ್ಚೆಯಾಗಬೇಕು. ಸದನದಲ್ಲಿ ಮಂಡನೆಯಾಗಿ ಬಹುಮತ ದೊರೆತ ನಂತರವಷ್ಟೇ ತಿದ್ದುಪಡಿ ಮಾಡಬೇಕು ಎಂದು ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಈ ಹಿಂದೆ ಕಿಡಿಕಾರಿದ್ದರು.
ಕಾಯ್ದೆಗಳಿಗೆ ಸುಗ್ರೀವಾಜ್ಞೆ ತರುವ ಮೂಲಕ ರೈತರಿಗೆ ಉಡುಗೊರೆ ಕೊಟ್ಟಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಿಜವಾಗಿಯೂ ಗಿಫ್ಟ್ ನೀಡಿದ್ದರೆ ಅಧಿವೇಶನದಲ್ಲಿ ಯಾಕೆ ಚರ್ಚೆ ಮಾಡಿಲ್ಲ ಎಂದು ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಭಾರತೀಯ ಕಿಸಾನ್ ಸಂಘಟನೆಯೇ ಈ ಹಿಂದೆ ಪ್ರಶ್ನೆ ಮಾಡಿದೆ.
ರೈತರ ಹೆಸರಿನಲ್ಲಿ ದೊಡ್ಡ ದೊಡ್ಡ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅನೇಕ ಕಾಯ್ದೆಗಳಿಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಿದೆ. ಇದನ್ನು ವಿರೋಧಿಸಿ ದೇಶದೆಲ್ಲೆಡೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಮೋದಿಯವರು ಪ್ರತಿಭಟನೆ ಮಾಡುತ್ತಿರುವುದು ರೈತರಲ್ಲ, ಮಧ್ಯವರ್ತಿಗಳು ಎಂದು ಹೇಳಿದ್ದಾರೆ ಎಂದು ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಭಾರತೀಯ ಕಿಸಾನ್ ಯೂನಿಯನ್ (BKU), ಅಖಿಲ ಭಾರತ ರೈತರ ಒಕ್ಕೂಟ (AIFU), ಅಖಿಲ ಭಾರತ ಕಿಸಾನ್ ಸಂಘರ್ಷಣ ಸಮನ್ವಯ ಸಮಿತಿ (AIKSCC), ಅಖಿಲ ಭಾರತ ಕಿಸಾನ್ ಮಹಾಸಂಘ್(AIKM), ಮಹಾರಾಷ್ಟ್ರ, ತಮಿಳುನಾಡು, ಪಂಜಾಬ್ , ಹರಿಯಾಣದ ವಿವಿಧ ರೈತ ಸಂಘಟನೆಗಳು, ಕರ್ನಾಟಕದ ಕೆಲವು ಸಂಘಟನೆಗಳು ಮಾತ್ರ ಬಂದ್ ಬೆಂಬಲಿಸಿವೆ.