ಕೋಲ್ಕತ್ತಾ: ಅಲ್ಪ ಸಂಖ್ಯಾತರ ಪರ ನೀತಿಗಳನ್ನು ಅನುಸರಿಸುವ ಮೂಲಕ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರ 'ಹಿಂದೂ ವಿರೋಧಿ ಮನೋಭಾವ' ಹೊಂದಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಆರೋಪಿಸಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ ನಡ್ಡಾ, ಟಿಎಂಸಿ ಬೆಂಬಲಿತ ಭೂ ಮಾಫಿಯಾ ರವೀಂದ್ರನಾಥ ಟ್ಯಾಗೋರ್ ಅವರ ಪಾರಂಪರಿಕ ಶಾಂತಿ ನಿಕೇತನ ವಿಶ್ವವಿದ್ಯಾಲಯವನ್ನು ಹಾಳುಗೆಡವಿದೆ ಎಂದು ಹೇಳಿದರು.
ಆಗಸ್ಟ್ 5 ರಂದು ಇಡೀ ದೇಶ ರಾಮ ಮಂದಿರ ಭೂಮಿ ಪೂಜೆಯನ್ನು ವೀಕ್ಷಿಸುತ್ತಿದ್ದರೆ, ಪಶ್ಚಿಮ ಬಂಗಾಳದ ಜನರನ್ನು ಅದರಿಂದ ತಡೆಯಲು ಮಮತಾ ಬ್ಯಾನರ್ಜಿ ಲಾಕ್ ಡೌನ್ ಘೋಷಿಸಿದ್ದರು. ಬಕ್ರೀದ್ ಹಬ್ಬದಂದು ಲಾಕ್ ಡೌನ್ ತೆರವುಗೊಳಿಸಿದ್ದರು. ಇದು, ಸರ್ಕಾರದ ಹಿಂದೂ ವಿರೋಧಿ ನೀತಿಯನ್ನು ಬಿಂಬಿಸುತ್ತದೆ ಎಂದು ಹೇಳಿದರು. ಹೊಸದಾಗಿ ರಚನೆಯಾದ ಬಿಜೆಪಿ ರಾಜ್ಯ ಘಟಕವನ್ನು ಉದ್ದೇಶಿಸಿ ಅವರು ವಿಡಿಯೋ ಸಂವಾದದಲ್ಲಿ ಮಾತನಾಡಿದರು.
ಪ್ರಜಾಪ್ರಭುತ್ವದ ಕಾಲಾಳುಗಳಂತೆ ವರ್ತಿಸುವ ರಾಜ್ಯ ಸರ್ಕಾರ 100 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ಹತ್ಯೆಗಳ ಬಗ್ಗೆ ಯಾಕೆ ಮೌನವಹಿಸಿದೆ ಎಂದು ಸರ್ಕಾರವನ್ನು ಪ್ರಶ್ನಿಸಿದ ನಡ್ಡಾ, ಕೋವಿಡ್ ವಿರುದ್ಧ ಯಶಸ್ವಿಯಾಗಿ ಹೇಗೆ ಹೋರಾಡಬೇಕೆಂದು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಗತ್ತಿಗೆ ತೋರಿಸಿದೆ ಎಂದು ಹೇಳಿದರು.