ಮುಂಬೈ: ಕಪ್ಪು ರಿಬ್ಬನ್ ಧರಿಸಿ ಕೆಲಸ ಮಾಡುವ ಮೂಲಕ ಮಹಾರಾಷ್ಟ್ರ ರಾಜಕೀಯ ನಾಯಕರು, ನವೆಂಬರ್ 1 ರಂದು ಎಂಇಎಸ್ ಕರೆ ನೀಡಿದ್ದ ಕರಾಳ ದಿನಾಚರಣೆಗೆ ಬೆಂಬಲ ನೀಡಿದರು.
ಮಹಾರಾಷ್ಟ್ರ ನೀರಾವರಿ ಸಚಿವ ಹಾಗೂ ಎನ್ಸಿಪಿ ಅಧ್ಯಕ್ಷ ಜಯಂತ ಪಾಟೀಲ ತಮ್ಮ ತೋಳಿಗೆ ಕಪ್ಪು ರಿಬ್ಬನ್ ಕಟ್ಟಿಕೊಂಡಿದ್ದು ಕಂಡು ಬಂದಿತು. ನಗರಾಭಿವೃದ್ಧಿ ಸಚಿವ ಹಾಗೂ ಶಿವಸೇನಾ ಮುಖಂಡ ಏಕನಾಥ ಶಿಂಧೆ ಥಾಣೆಯಲ್ಲಿ ಕಪ್ಪು ಬಲೂನ್ಗಳನ್ನು ಹಾರಿ ಬಿಟ್ಟರು.
ಸೂರ್ಯ ಚಂದ್ರರಿರುವವರೆಗೂ ಬೆಳಗಾವಿ ಕರ್ನಾಟಕದ್ದೇ ಎಂದು ಕರ್ನಾಟಕದ ಡಿಸಿಎಂ ಲಕ್ಷ್ಮಣ ಸವದಿ ನಿನ್ನೆ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶಿವಸೇನಾ ಸಂಸದ ಸಂಜಯ ರಾವುತ್, ಕಳೆದ 60 ವರ್ಷಗಳಿಂದ ಬೆಳಗಾವಿ ಮರಾಠಿಗರು ತಮ್ಮ ಹಕ್ಕಿಗಾಗಿ ಹೋರಾಡುತ್ತಿದ್ದಾರೆ. ಅವರ ಭಾವನೆಗಳನ್ನು ಗೌರವಿಸಬೇಕು. ಹಾಗೆಯೇ ಕರ್ನಾಟಕ-ಆಂಧ್ರ ಅಥವಾ ಕೇರಳ ಗಡಿಯಲ್ಲಿನ ಕನ್ನಡಿಗರು ಕರ್ನಾಟಕಕ್ಕೆ ಸೇರಲು ಬಯಸಿದರೆ ಅವರ ಭಾವನೆಗಳನ್ನೂ ಗೌರವಿಸಬೇಕು ಎಂದು ಹೇಳಿದರು.
ಒಟ್ಟಾರೆಯಾಗಿ ನವೆಂಬರ್ 1 ರಂದು ಕರಾಳ ದಿನಾಚರಣೆಯ ಹೆಸರಲ್ಲಿ ಮಹಾರಾಷ್ಟ್ರ ನಾಯಕರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡಿದ್ದು ಸ್ಪಷ್ಟವಾಗಿತ್ತು. ಗಡಿ ವಿವಾದವನ್ನು ತಾವೇ ಸುಪ್ರೀಂ ಕೋರ್ಟಿಗೆ ತೆಗೆದುಕೊಂಡು ಹೋದರೂ ಕನ್ನಡ ಹಾಗೂ ಮರಾಠಿ ಭಾಷಿಕರ ಭಾವನೆಗಳೊಂದಿಗೆ ಆಟವಾಡುವ ಮಹಾರಾಷ್ಟ್ರ ಮುಖಂಡರ ಚಾಳಿ ಮುಂದುವರೆದಿದೆ.