ಹೈದರಾಬಾದ್ : ಪಾಕಿಸ್ತಾನ ಮೂಲದ ಸೈಬರ್ ದಾಳಿಕೋರರು ಆರೋಗ್ಯ ಸೇತು ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವಂತೆ ಲಿಂಕ್ ಕಳುಹಿಸಿ ಫಿಶಿಂಗ್ ದಾಳಿ ಮಾಡಲು ಯತ್ನಿಸುತ್ತಿದ್ದಾರೆ. ಆದ್ದರಿಂದ ಜನರು ಎಚ್ಚರಿಕೆಯಿಂದ ಇರುವಂತೆ ತೆಲಂಗಾಣ ಸರ್ಕಾರದ ಅಧಿಕಾರಿಗಳು ಸೂಚಿಸಿದ್ದಾರೆ.
ಈ ಬಗ್ಗೆ ಎಚ್ಚರಿಸಿರುವ ತೆಲಂಗಾಣ ಪುರಸಭೆ ಆಡಳಿತ ಮತ್ತು ನಗರಾಭಿವೃದ್ಧಿ ಇಲಾಖೆ, ಗುಪ್ತಚರ ಇಲಾಖೆ ಮಾಹಿತಿ ಪ್ರಕಾರ ಭಾರತೀಯ ರಕ್ಷಣಾ ಸಿಬ್ಬಂದಿ ಮತ್ತು ಸರ್ಕಾರಿ ಅಧಿಕಾರಿಗಳ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ನಕಲಿ ಆರೋಗ್ಯ ಸೇತು ಆ್ಯಪ್ನ ಲಿಂಕ್ನ್ನು ಎಸ್ಎಂಎಸ್ ಅಥವಾ ವಾಟ್ಸ್ಆ್ಯಪ್ ಸಂದೇಶದ ಮೂಲಕ ಕಳುಹಿಸಿ ಮಾಹಿತಿ ಕದಿಯಲು ಯತ್ನಿಸುತ್ತಿದ್ದಾರೆ ಎಂದಿದೆ.
ಮೊಬೈಲ್ಗೆ ಬಂದ ಆರೋಗ್ಯ ಸೇತು ಆ್ಯಪ್ ಲಿಂಕ್ ತೆರೆದ ತಕ್ಷಣ ಚಾಟ್ಮಿ ಅನ್ನುವ ಅಪ್ಲಿಕೇಶನ್ ಒಂದು ಡೌನ್ಲೋಡ್ ಆಗುತ್ತದೆ. ಇದರ ಮೂಲಕ ರಹಸ್ಯ ಮಾಹಿತಿಗಳನ್ನು ಕದಿಯಲು ಸುಲಭವಾಗುತ್ತದೆ. ಆದ್ದರಿಂದ ಪುರಸಭೆ ಆಡಳಿತ, ನಗರಾಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ ಜಾಗರೂಕರಾಗಿರಬೇಕು ಎಂದು ಸೂಚಿಸಲಾಗಿದೆ.
ಫಿಶಿಂಗ್ ಅಟ್ಯಾಕ್ ಎಂದರೆ ಎಸ್ಎಂಎಸ್ ಅಥವಾ ಇತರ ಇಂಟರ್ನೆಟ್ ತಾಣಗಳ ಮೂಲಕ ಸೈಬರ್ ದಾಳಿ ಮಾಡುವ ವಿಧಾನವಾಗಿದೆ. ಸೈಬರ್ ವಂಚಕರು ಆರೋಗ್ಯ ಸೇತು ಆ್ಯಪ್ ಮುಖಾಂತರ ಸೈಬರ್ ದಾಳಿ ನಡೆಸುವುದನ್ನು ತಪ್ಪಿಸಲು ಜನರು ಮೈ ಗೌವ್.ಇನ್ ಅಥವಾ ಐಒಎಸ್, ಗೂಗಲ್ ಪ್ಲೆ ಸ್ಟೋರ್ಗಳ ಮುಖಾಂತರ ಮಾತ್ರ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವಂತೆ ಅಧಿಕಾರಿಗಳು ತಿಳಿಸಿದ್ದಾರೆ.