ನವದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 13 ನೇ ಆವೃತ್ತಿಯನ್ನು ಎಲ್ಲಿ ನಡೆಸಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಬಿಸಿಸಿಐ 3-2 ಆಧಾರದಲ್ಲಿ ಅಭಿಪ್ರಾಯ ಪಡೆದುಕೊಳ್ಳಲು ನಿರ್ಧರಿಸಿದೆ. ದೇಶದಲ್ಲಿಯೇ ಲೀಗ್ ನಡೆಸಬೇಕೆಂಬುದು ಹೆಚ್ಚಿನವರ ವಾದ, ಹೊರ ದೇಶದಲ್ಲಿ ನಡೆಸಲಿ ಎಂಬುದು ಕೆಲವರ ವಾದ.
ಪ್ರಮುಖ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಬಿಸಿಸಿಐ ಅಧಿಕಾರಿಯೊಬ್ಬರು, ಭಾರತದಲ್ಲಿ ಕೊರೊನಾ ವೈರಸ್ ಹರಡುವಿಕೆ ಪ್ರಮಾಣ ಕಡಿಮೆಯಾದರೆ ಭಾರತದಲ್ಲೇ ಲೀಗ್ ನಡೆಸಲಿ, ಇಲ್ಲವಾದರೆ ವಿದೇಶದಲ್ಲಿ ನಡೆಸಲು ಅನುಕೂಲವಾದರೆ ಟೂರ್ನಿಯನ್ನು ಬೇರೆ ದೇಶದಲ್ಲಿ ನಡೆಸಲಿ ಎಂಬುದು ಕೆಲವರ ವಾದವೆಂದು ತಿಳಿಸಿದರು. ಕೆಲವರು ಆಟಗಾರರ ಮತ್ತು ಪ್ರೇಕ್ಷಕರ ಹಿತ ದೃಷ್ಟಿಯಿಂದಾಗಿ ವಿದೇಶಕ್ಕೆ ಪಂದ್ಯವನ್ನು ಸ್ಥಳಾಂತರಿಸುವಂತೆ ಅಭಿಪ್ರಾಯ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಫ್ರ್ಯಾಂಚೈಸ್‌ನ ಅಧಿಕಾರಿಯೊಬ್ಬರು, ಲೀಗ್ ಆಯೋಜನೆ ಆದ್ಯತೆ ಯಾವಾಗಲೂ ದೇಶದಲ್ಲಿ ಪಂದ್ಯಾವಳಿಯನ್ನು ನಡೆಸುವುದರ ಮೇಲೆ ಇರಬೇಕು ಎಂದು ಹೇಳಿದ್ದಾರೆ. ನೀವು ದೇಶದಲ್ಲಿ ಲೀಗ್ ನಡೆಸುವುದರಿಂದ, ಜಗತ್ತಿಗೆ ಹಾಗೂ ಭಾರತೀಯರಿಗೆ ದೇಶ ಕೊರೊನಾದಿಂದ ಸಾಮಾನ್ಯ ಸ್ಥಿತಿಗೆ ಮರಳುವಲ್ಲಿ ಯಶಸ್ವಿಯಾಗಿದೆ ಎಂಬ ಸಕಾರಾತ್ಮಕ ಸಂಕೇತ ನೀಡಬಹುದು. ಹೊರಗೆ ಹೋಗಿ ಆಡುವುದರಿಂದ ವೆಚ್ಚ ಹೆಚ್ಚಾಗುತ್ತದೆ. ಆದ್ದರಿಂದ ಭಾರತದಲ್ಲಿ ಪಂದ್ಯ ಆಯೋಜನೆ ಹೆಚ್ಚು ಸೂಕ್ತ ಎಂದು ತಿಳಿಸಿದ್ದಾರೆ ಎಂದರು.
ಇದೀಗ ಟಿ-20 ವಿಶ್ವಕಪ್ ಕೂಡ ಮುಂದೂಡುವ ಸಾಧ್ಯತೆ ಹೆಚ್ಚಿರುವುದರಿಂದ ಇಡೀ ವಿಶ್ವದ ಗಮನ ಐಪಿಎಲ್ ಮೇಲೆ ಬಿದ್ದಿದೆ ಎಂದು ಅವರು ತಿಳಿಸಿದ್ದಾರೆ.