ಲಕ್ನೋ: ರಾಮಜನ್ಮಭೂಮಿ ಪ್ರಕರಣದ ತೀರ್ಪು ಹಿನ್ನೆಲೆಯಲ್ಲಿ ಉತ್ತರಪ್ರದೇಶದಲ್ಲಿ ಸಕಲ ರೀತಿಯ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು ರಾಜ್ಯದೆಲ್ಲಡೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಇದರ ಬೆನ್ನಲ್ಲೇ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಮುಂದಿನ ಮೂರು ದಿನಗಳ ಕಾಲ ಅಂದರೆ ನವೆಂಬರ್ 9ರಿಂದ 11ರವರೆಗೆ ಎಲ್ಲ ಶಾಲಾ-ಕಾಲೇಜುಗಳು ಹಾಗೂ ಶಿಕ್ಷಣ ತರಬೇತಿ ಕೇಂದ್ರಗಳಿಗೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಲಾಗಿದೆ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ತುರ್ತು ಸಭೆ ಕರೆದಿದ್ದಾರೆ.
ಈ ಮಧ್ಯೆ ಮಧ್ಯ ಪ್ರದೇಶ ರಾಜಧಾನಿ ಭೋಪಾಲ್ನಲ್ಲೂ ಸೆಕ್ಷನ್ 144 (ನಿಷೇಧಾಜ್ಞೆ) ಜಾರಿಗೊಳಿಸಲಾಗಿದ್ದು ಎಲ್ಲ ಸರ್ಕಾರಿ, ಖಾಸಗಿ ಶಾಲೆಗಳಿಗೆ ನಾಳೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅಯೋಧ್ಯೆಯ ಹಿರಿಯ ಪೊಲೀಸ್ ಅಧಿಕಾರಿ ಅರೀಶ್ ತಿವಾರಿ, ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾವಹಿಸಲಾಗಿದ್ದು, ವಾಟ್ಸ್ಆಪ್, ಫೇಸ್ಬುಕ್ ಸೇರಿದಂತೆ ಪ್ರಮುಖ ಜಾಲತಾಣಗಳ ಮೇಲೆ ನಿಗಾ ಇರಿಸಲಾಗಿದ್ದು, ಯಾವುದೇ ರೀತಿಯ ಪ್ರಚೋದನಕಾರಿ ಸಂದೇಶಕ್ಕೆ ಆಸ್ಪದ ನೀಡಲ್ಲ ಎಂದಿದ್ದಾರೆ.