ನವದೆಹಲಿ: ಐತಿಹಾಸಿಕ ಅಯೋಧ್ಯೆ ರಾಮ ಮಂದಿರ ದೇವಾಲಯದ ಭೂಮಿ ಪೂಜೆ ನೆರವೇರುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಹಂತಹಂತವಾಗಿ ದೇವಸ್ಥಾನ ನಿರ್ಮಿಸಲು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿರ್ಧರಿಸಿದ್ದು, ಕೊನೆಯದಾಗಿ ರಾಮನ ಮಂದಿರ ಯಾವ ರೀತಿಯಲ್ಲಿ ಕಾಣಲಿದೆ ಎಂಬುದರ ಫೋಟೊ ಬಿಡುಗಡೆ ಮಾಡಲಾಗಿದೆ.
![Ayodhya RamTemple](https://etvbharatimages.akamaized.net/etvbharat/prod-images/eekmou9uwaezbvd_0408newsroom_1596535747_601.png)
ಉತ್ತರ ಭಾರತದ ಹಿಂದೂ ದೇವಸ್ಥಾನಗಳ ವಾಸ್ತುಶಿಲ್ಪ ಶೈಲಿಯಾಗಿರುವ ನಾಗರ ಶೈಲಿಯಲ್ಲಿ ಈ ದೇಗುಲ ನಿರ್ಮಾಣವಾಗಲಿದೆ. ದೇಗುಲದಲ್ಲಿ ಐದು ಗುಮ್ಮಟ, ಗರ್ಭಗುಡಿಯ ಮೇಲೆ ಶಿಖರ, ದೇಗುಲದೊಳಗೆ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಹೋಗಲು ಅವಕಾಶವಿರುವ ರೀತಿಯಲ್ಲಿ ವಿಸ್ತಾರವಾದ ಪ್ರಾಂಗಣ ರಚನೆಯಾಗಲಿದೆ.
ಮೂರು ಅಂತಸ್ತಿನ ಭವ್ಯ ಮಂದಿರದಲ್ಲಿ, ಆಕರ್ಷಕ ಮಂಟಪಗಳು, ಶಿಖರ ಇರಲಿದ್ದು, 360 ಸ್ತಂಭಗಳಿರಲಿವೆ. ರಾಮ ಮಂದಿರದ ಸುತ್ತಲೂ ಬೇರೆ ಬೇರೆ ದಿಕ್ಕುಗಳಲ್ಲಿ ನಾಲ್ಕು ಮಂದಿರಗಳು ನಿರ್ಮಾಣಗೊಳ್ಳಲಿವೆ.
ಮಂದಿರ 161 ಅಡಿ ಎತ್ತರವಿರಲಿದೆ. ದೇಗುಲದ ವಿವಿಧ ಜಾಗಗಳಲ್ಲಿ ಶ್ರೀರಾಮ ಎಂದು ಬೇರೆ ಬೇರೆ ಭಾಷೆಗಳಲ್ಲಿ ಬರೆಯಲಾಗುತ್ತದೆ.