ನವದೆಹಲಿ: ರಾಮ ಜನ್ಮ ಭೂಮಿಯಾದ ಅಯೋಧ್ಯೆಯ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆ ತಿಳಿಸುವ ಸಲುವಾಗಿ ಮೂರು ದಿನಗಳ ಕಾಲ ನಡೆದ ಅಯೋಧ್ಯೆ ಪರ್ವ ಕಾರ್ಯಕ್ರಮ ಭಾನುವಾರ ಮುಕ್ತಾಯಗೊಂಡಿತು.
ಶುಕ್ರವಾರದಿಂದ ಪ್ರಾರಂಭವಾದ ಈ ಕಾರ್ಯಕ್ರಮವು ದೆಹಲಿಯ ಇಂದಿರಾ ಗಾಂಧಿ ರಾಷ್ಟ್ರೀಯ ಕಲೆಗಳ ಕೇಂದ್ರದಲ್ಲಿ ನಡೆಯಿತು. ಅಯೋಧ್ಯೆಯ ಬಿಜೆಪಿ ಸಂಸದ ಲಲ್ಲುಸಿಂಗ್ ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಈ ಕಾರ್ಯಕ್ರಮವು ಭಗವಾನ್ ರಾಮನ ಬಗ್ಗೆ ಜನರಿಗೆ ಪ್ರಬುದ್ಧತೆ ನೀಡುವುದಲ್ಲದೇ ಜನರಿಗೆ ‘ರಾಮ ರಾಜ್ಯ’ದ ಪ್ರಮುಖ ಅಂಶಗಳನ್ನು ಕಿರು ವಿಡಿಯೋಗಳು ಮತ್ತು ಸೆಮಿನಾರ್‌ಗಳ ಮೂಲಕ ವಿವರಿಸಿದೆ ಎಂದ ಲಲ್ಲು ಸಿಂಗ್ ಅಭಿಪ್ರಾಯಪಟ್ಟರು.
ಕಳೆದ ವರ್ಷ ಕೂಡ ದೆಹಲಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ. ಈ ಬಾರಿ ಅಯೋಧ್ಯೆಯ ಬಗ್ಗೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನಿಂದಾಗಿ ಹೆಚ್ಚಿನ ಜನರು ಸಂತೋಷ ಮತ್ತು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿಸಿದರು.
ಈ ಕಾರ್ಯಕ್ರಮವನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವೆ ಸ್ಮೃತಿ ಇರಾನಿ ಮತ್ತು ಶ್ರೀ ಜನಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಉದ್ಘಾಟಿಸಿದರು.