ನವದೆಹಲಿ: ಅಯೋಧ್ಯೆ ಭೂ ವಿವಾದಕ್ಕೆ ಮಧ್ಯಸ್ಥಿಕೆ ವಿಫಲವಾಗಿದ್ದು, ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ನಿತ್ಯ ವಿಚಾರಣೆ ಮಾಡುವುದಾಗಿ ಹೇಳಿರುವ ಸರ್ವೋಚ್ಚ ನ್ಯಾಯಾಲಯ ಇಂದಿನಿಂದ ವಿಚಾರಣೆ ಆರಂಭಿಸಲಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪಂಚ ಸದಸ್ಯ ಪೀಠ ದೇಶದ ಅತ್ಯಂತ ಸೂಕ್ಷ್ಮ ವಿಚಾರವನ್ನು ಬಗೆಹರಿಸುವ ನಿಟ್ಟಿನಲ್ಲಿ ನಿತ್ಯ ವಿಚಾರಣೆಗೆ ಮುಂದಾಗಿದೆ.
ಅಯೋಧ್ಯೆ ಭೂ ವಿವಾದಕ್ಕೆ ಮಧ್ಯಸ್ಥಿಕೆಯೇ ಪರಿಹಾರ ಎಂದು ಪರಿಗಣಿಸಿ ಸುಪ್ರೀಂಕೋರ್ಟ್ ಕಳೆದ ವರ್ಷ ಮೂವರು ಸದಸ್ಯರ ಮಧ್ಯಸ್ಥಿಕೆ ಸಮಿತಿ ರಚಿಸಿತ್ತು. ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ಎಫ್.ಎಂ.ಖಲೀಫುಲ್ಲಾ, ಧಾರ್ಮಿಕ ಗುರು ಶ್ರೀ ರವಿಶಂಕರ್ ಗುರೂಜಿ ಹಾಗೂ ಕಾನೂನು ತಜ್ಞ ಶ್ರೀರಾಮ್ ಪಂಚುರನ್ನು ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು.
ಮಧ್ಯಸ್ಥಿಕೆ ಸಮಿತಿ ಸಂಪೂರ್ಣವಾಗಿ ಎಲ್ಲವನ್ನು ಆಲಿಸಿ ವರದಿಯನ್ನು ಜುಲೈ 31ಕ್ಕೆ ಸುಪ್ರೀಂಗೆ ಸಲ್ಲಿಕೆ ಮಾಡಿತ್ತು. ಮಧ್ಯಸ್ಥಿಕೆ ಸಮಿತಿ ವಿವಾದ ಬಗೆಹರಿಸಲು ಪ್ರಯತ್ನ ನಡೆಸಿದ್ದು ಕಂಡುಬಂದಿದ್ದರೂ ತಾರ್ಕಿಕ ಅಂತ್ಯ ಕಂಡಿಲ್ಲ ಎಂದು ಅಭಿಪ್ರಾಯಪಟ್ಟು ಆಗಸ್ಟ್ 6ರಿಂದ ನಿತ್ಯ ವಿಚಾರಣೆ ಮಾಡುವುದಾಗಿ ದೇಶದ ಅತ್ಯುನ್ನತ ನ್ಯಾಯಾಲಯ ಹೇಳಿತ್ತು.