ಶ್ರೀನಗರ(ಜಮ್ಮು ಕಾಶ್ಮೀರ): ಕಣಿವೆನಾಡಿನಲ್ಲಿ ಪ್ರತಿಕೂಲ ಹವಾಮಾನದ ಬಗ್ಗೆ ಮುನ್ಸೂಚನೆಯನ್ನು ಅಲ್ಲಿನ ಪ್ರಾಧಿಕಾರಗಳು ನೀಡಿದ್ದು, ಕಾಶ್ಮೀರ ವಿಭಾಗದಲ್ಲಿ ಹಿಮಪಾತವಾಗುವ ಎಚ್ಚರಿಕೆ ನೀಡಿವೆ.
ಮುಂದಿನ ಕೆಲವು ದಿನಗಳಲ್ಲಿ ಕುಪ್ವಾರಾ ಜಿಲ್ಲೆಯಲ್ಲಿ ಹಿಮಪಾತದ ಎಚ್ಚರಿಕೆ ನೀಡಲಾಗಿದ್ದು, ಬಾರಾಮುಲ್ಲಾ, ಅನಂತ್‌ನಾಗ್, ಕುಲ್ಗಾಂ, ಬಂಡಿಪೋರಾ ಮತ್ತು ಗಂದೇರ್ಬಾಲ್ ಜಿಲ್ಲೆಗಳಲ್ಲಿಯೂ ಕೂಡ ಹಿಮಪಾತವಾಗಲಿದೆ. ಆದರೆ, ಕಡಿಮೆ ಅಪಾಯಕಾರಿಯಾಗಲಿದೆ ಎಂದು ವಿಪತ್ತು ನಿರ್ವಹಣಾ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಿಮಪಾತದ ಸೂಚನೆ ನೀಡುವುದರ ಜೊತೆಗೆ ಜನರು ತಮ್ಮ ಮನೆಗಳಿಂದ ಅನಗತ್ಯವಾಗಿ ಹೊರಗೆ ಬರಬಾರದು ಎಂದು ಸೂಚನೆ ಮಾಡಲಾಗಿದೆ ಎಂದು ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ಎತ್ತರದ ಪ್ರದೇಶಗಳಲ್ಲಿ ಇರುವ ಜನರಿಗೆ ಹಿಮಪಾತ ಬಹುದೊಡ್ಡ ಸಮಸ್ಯೆಯಾಗಿರಲಿದ್ದು, ಜೊತೆಗೆ ಗಡಿ ನಿಯಂತ್ರಣ ರೇಖೆಯ ಬಳಿ ಕಾರ್ಯ ನಿರ್ವಹಣೆ ಮಾಡುವ ಸೇನೆಗೂ ಕೂಡ ಹಿಮಪಾತ ಸಮಸ್ಯೆಯಾಗಲಿದೆ.
ಕೆಲವು ವರ್ಷಗಳಿಂದ ಹಲವು ಮಂದಿಯನ್ನು ಹಿಮಪಾತ ಬಲಿತೆಗೆದುಕೊಂಡಿದ್ದು, ಅರಣ್ಯ ನಾಶವೇ ಹಿಮಪಾತಕ್ಕೆ ಕಾರಣವೆಂದು ಅಲ್ಲಿನ ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ.