ನವದೆಹಲಿ: ದೇಶದಾದ್ಯಂತ ಬಿಸಿಲ ಬೇಗೆ ಆವರಿಸಿದ್ದು, ದೆಹಲಿಯಲ್ಲಿ ನಿನ್ನೆ ದಾಖಲೆಯ ಗರಿಷ್ಠ ತಾಪಮಾನ ದಾಖಲಾಗಿದೆ.
ನಿನ್ನೆ ದೆಹಲಿಯ ಪಾಲಮ್ ಪ್ರದೇಶದಲ್ಲಿ 46.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಮೇ ತಿಂಗಳಲ್ಲಿ ದಾಖಲಾಗಿರುವ ದಾಖಲೆಯ ಗರಿಷ್ಠ ತಾಪಮಾನ ಇದಾಗಿದೆ. 2013 ರ ಮೇ ತಿಂಗಳಲ್ಲಿ 47.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ನಂತ ರ ದೆಹಲಿಯಲ್ಲಿ 5 ವರ್ಷಗಳ ಬಳಿಕ ಗರಿಷ್ಠ ತಾಪಮಾನ ದಾಖಲಾಗಿದೆ.
1998ರ ಮೇ 26 ರಂದು 48.4 ಡಿಗ್ರಿ ತಾಪಮಾನ ದಾಖಲಾಗಿದ್ದು, ಈ ವರೆಗಿನ ಗರಿಷ್ಠ ತಾಪಮಾನ ಇದಾಗಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ತಾಪಮಾನ ಏರಿಕೆಗೆ ಕಾರಣ:
ದೆಹಲಿಯ ಪಾಲಮ್ ವಿಮಾನ ನಿಲ್ದಾಣವಿರುವ ಪ್ರದೇಶವಾಗಿದ್ದು, ಇತರೆ ಭಾಗಗಳಿಗಿಂತಲೂ ಹೆಚ್ಚಿನ ತಾಪಮಾನವಿರುತ್ತದೆ. ಇಲ್ಲಿ ವಿಮಾನ ಹಾರಾಟ ಚಟುವಟಿಕೆಯಿಂದ ಹೊರಸೂಸುವ ಹೊಗೆಯು ವಾತಾವರಣದ ಮೇಲೆ ಪರಿಣಾಮ ಬೀರಿ ತಾಪಮಾನ ಹೆಚ್ಚಾಗುವಿಕೆಗೆ ಕಾರಣವಾಗುತ್ತದೆ ಎಂದು ಪ್ರಾದೇಶಿಕ ಹವಾಮಾನ ಸಂಸ್ಥೆಯ ಮುಖ್ಯಸ್ಥ ಕುಲ್ದೀಪ್ ಶ್ರೀವಾಸ್ತವ್ ತಿಳಿಸಿದ್ದಾರೆ.