ಬೈಲಹೊಂಗಲ (ಬೆಳಗಾವಿ) : ಎಂಆರ್‌ಪಿ ಬೆಲೆಗೆ ಮದ್ಯ ಮಾರಾಟ ಮಾಡುವಂತೆ ಹೇಳಿದ ಯುವಕರಿಬ್ಬರ ಮೇಲೆ ವೈನ್ ಶಾಪ್ ಸಿಬ್ಬಂದಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ.
ತಾಲೂಕಿನ ದೊಡವಾಡ ಗ್ರಾಮದ ಕೊಪ್ಪದ ಅಗಸಿ ಬಳಿಯಿರುವ ಶ್ರೀದೇವಿ ವೈನ್ ಶಾಪ್ ಸಿಬ್ಬಂದಿ ಅದೇ ಗ್ರಾಮದ ನಾಗಪ್ಪ ಬಾರಿಗಿಡದ ಹಾಗೂ ಧರೆಪ್ಪ ಕುರುಬರ ಎಂಬುವರ ಮೇಲೆ ಹಲ್ಲೆ ನಡೆಸಿದ್ದಾರೆ. ಹಿಗ್ಗಾಮುಗ್ಗಾ ಥಳಿಸಿದ ಪರಿಣಾಮ ನಾಗಪ್ಪ ಬಾರಿಗಿಡದ ಎಂಬಾತನ ಸ್ಥಿತಿ ಗಂಭೀರವಾಗಿದೆ. ದೊಡವಾಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೊದಲು ಚಿಕಿತ್ಸೆ ನೀಡಲಾಯಿತು.
ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗ್ಗೆಯೇ ಘಟನೆ ನಡೆದರೂ ಪಿಎಸ್ಐ ಹಾಗೂ ಪೊಲೀಸ್ ಸಿಬ್ಬಂದಿ ವೈನ್ ಶಾಪ್ ಮಾಲೀಕರ ಪರವಾಗಿಯೇ ನಿಂತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು. ಈವರೆಗೂ ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲ್ಲೆ ನಡೆಸಿದ ಸುದ್ದಿ ತಿಳಿಯುತ್ತಿದ್ದಂತೆ ಹಲ್ಲೆಗೊಳಗಾದ ಯುವಕರ ಸಂಬಂಧಿಕರು ಹಾಗೂ ಗ್ರಾಮಸ್ಥರು ವೈನ್ ಶಾಪ್ಗೆ ಮುತ್ತಿಗೆ ಹಾಕಿದರು. ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಬಾರ್ ಬಳಿ ಜಮಾಯಿಸಿದ್ದ ಜನರನ್ನು ಚದುರಿಸಿ ಬಾರ್ ಸಿಬ್ಬಂದಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಬಳಿಕ ಠಾಣೆ ಬಳಿಯೂ ಜಮಾಯಿಸಿದ ಸಾರ್ವಜನಿಕರು ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಜೊತೆಗೆ ಎಂಆರ್‌ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟ ಅಬಕಾರಿ ಅಧಿಕಾರಿಗಳ ವಿರುದ್ಧವೂ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.