ದಿಬ್ರುಗರ್(ಅಸ್ಸೋಂ): ಇಲ್ಲಿನ ಜನರು ಪ್ರವಾಹದಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಕಳಪೆ ಗುಣಮಟ್ಟದ ರಸ್ತೆ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿ ಕೊಡುವ ದೃಷ್ಟಿಯಿಂದ ವಿಶಿಷ್ಟ ಪ್ರತಿಭಟನೆ ಮಾಡಿದರು. ಇಲ್ಲಿನ ಚಾಬುವಾನ ಕೆಸರಿನ ರಸ್ತೆಯಲ್ಲಿ ಭತ್ತ ನಾಟಿ ಮಾಡುವ ಮೂಲಕ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.
ತಮ್ಮೂರಿನ ಪರಿಸ್ಥಿತಿ, ಪ್ರವಾಹದ ಹೊಡೆತ, ಇವುಗಳ ಮಧ್ಯೆ ಕಳಪೆ ರಸ್ತೆ ನಿರ್ಮಾಣದದ ವಿರುದ್ಧ ಗ್ರಾಮಸ್ಥರು ಆಕ್ರೋಶಗೊಂಡಿದ್ದರು. ಮಳೆಗೆ ಹಾಳಾದ ರಸ್ತೆಗಳನ್ನ ಕಂಡು ರೋಸಿಹೋಗಿದ್ದಾರೆ. ಮಕ್ಕಳು ಶಾಲೆಗೆ ಮತ್ತು ಬೇರೆಡೆ ಹೋಗಲು ಸಾಕಷ್ಟು ತೊಂದರೆಯಾಗುತ್ತಿದೆ. ಅಷ್ಟೇ ಅಲ್ಲದೆ ಆ್ಯಂಬುಲೆನ್ಸ್ಗಳು ರಸ್ತೆ ಇಲ್ಲದ ಕಾರಣ ಹಳ್ಳಿಗಳಿಗೆ ಬರಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಹಲವರು ಚಿಕಿತ್ಸೆ ಸಿಗದೇ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಕೂಡಲೇ ಸರ್ಕಾರ ವ್ಯವಸ್ಥಿತವಾದ ರಸ್ತೆ ನಿರ್ಮಾಣ ಮಾಡಬೇಕೆಂದು ಈ ವಿಶಿಷ್ಟ ಪ್ರತಿಭಟನೆ ಮಾಡಿ ಮನವಿ ಮಾಡಿದರು.
ಅಸ್ಸೋಂನಲ್ಲಿ ಬುಧವಾರ ಸಂಭವಿಸಿದ ಪ್ರವಾಹದಲ್ಲಿ ಏಳು ಜನರು ಸಾವನ್ನಪ್ಪಿದ್ದು, 28 ಜಿಲ್ಲೆಗಳಲ್ಲಿ ಸುಮಾರು 36 ಲಕ್ಷ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಅಸ್ಸೋಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಎಸ್‌ಡಿಎಂಎ) ದೈನಂದಿನ ಪ್ರವಾಹ ವರದಿಯ ಪ್ರಕಾರ, ಮೊರಿಗಾಂವ್ ಜಿಲ್ಲೆಯಲ್ಲಿ ಮೂರು ಜನರು, ಬಾರ್‌ಪೆಟಾದಲ್ಲಿ ಇಬ್ಬರು, ಸೋನಿತ್‌ಪುರ ಮತ್ತು ಗೋಲಾಘಾಟ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.
ಒಟ್ಟಾರೆ ರಾಜ್ಯದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಈವರೆಗೆ 93 ಜನರು ಸಾವನ್ನಪ್ಪಿದ್ದಾರೆ. ಭೂಕುಸಿತದಿಂದಲೇ 26 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.