ಗುವಾಹಟಿ: ಯಾವುದೇ ಸಮಸ್ಯೆಗಳಿಲ್ಲದೆ ಪ್ರತಿದಿನ ತರಗತಿಗಳಿಗೆ ಹಾಜರಾಗಲು 12ನೇ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೆ ಸ್ಕೂಟಿ ವಿತರಿಸಲಾಗುವುದು ಎಂದು ಅಸ್ಸೋಂ ಶಿಕ್ಷಣ ಸಚಿವ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.
2018 ಮತ್ತು 2019ನೇ ಸಾಲಿನಲ್ಲಿ ಪ್ರಥಮ ದರ್ಜೆಯಲ್ಲಿ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿನಿಯರಿಗೂ ಸ್ಕೂಟಿ ವಿತರಿಸಲಾಗುವುದು. ಈ ಸಂಖ್ಯೆ ಒಂದು ಲಕ್ಷ ದಾಟಿದರೂ ಸಹ ಎಲ್ಲರಿಗೂ ನೀಡಲಾಗುವುದು. ಸದ್ಯಕ್ಕೆ ರಾಜ್ಯ ಸರ್ಕಾರ 22,000 ದ್ವಿಚಕ್ರ ವಾಹನಗಳನ್ನು ವಿತರಿಸುತ್ತಿದೆ. ಇದಕ್ಕಾಗಿ 144.30 ಕೋಟಿ ರೂ. ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಹಿಮಂತ ಬಿಸ್ವಾ ಹೇಳಿದ್ದಾರೆ.
ಇದನ್ನೂ ಓದಿ: ಸುಲಿಗೆ ಪ್ರಕರಣದಲ್ಲಿ ಗ್ಯಾಂಗ್ಸ್ಟರ್ ಛೋಟಾ ರಾಜನ್ಗೆ 2 ವರ್ಷ ಜೈಲು ಶಿಕ್ಷೆ
ಹಾಗೇಯೇ ಪ್ರಾಥಮಿಕ ಶಾಲೆಯಿಂದ ಸ್ನಾತಕೋತ್ತರ ಹಂತದವರೆಗಿನ ಎಲ್ಲಾ ಹೆಣ್ಣು ಮಕ್ಕಳಿಗೆ ಆರ್ಥಿಕ ನೆರವು ಒದಗಿಸಲಾಗುವುದು. ಶಾಲಾ ವಿದ್ಯಾರ್ಥಿನಿಯರಿಗೆ ಪ್ರತಿನಿತ್ಯ 100 ರೂ., ಪದವಿಪೂರ್ವ ವಿದ್ಯಾರ್ಥಿನಿಯರಿಗೆ 1,500 ಮತ್ತು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಯುವತಿಯರಿಗೆ 2,000 ರೂ. ನೀಡುತ್ತೇವೆ. ಕಳೆದ ವರ್ಷ ಈ ಯೋಜನೆಯನ್ನು ಜಾರಿಗೆ ತರಬೇಕೆಂದಿದ್ದೆವು. ಆದರೆ ಕೋವಿಡ್ನಿಂದಾಗಿ ವಿಳಂಬವಾಗಿತ್ತು. ಶೀಘ್ರದಲ್ಲೇ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು ಸಚಿವರು ಹೇಳಿದರು.