ನವದೆಹಲಿ: ವೇಶ್ಯಾವಾಟಿಕೆಯಲ್ಲಿ ಬಲವಂತಾವಾಗಿ ತೊಡಗಿಸಿಕೊಂಡಿದ್ದ 17 ವರ್ಷದ ಗರ್ಭಿಣಿ ಬಾಲಕಿಯನ್ನು ನವದೆಹಲಿಯ ರೈಲ್ವೆ ನಿಲ್ದಾಣದಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ (ಡಿಸಿಪಿಸಿಆರ್) ರಕ್ಷಿಸಿದೆ. ಬಾಲಕಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಹೆಚ್‌ಐವಿ ಪಾಸಿಟಿವ್ ಇರುವುದು ವರದಿಯಾಗಿದೆ.
17 ವರ್ಷದ ಬಾಲಕಿಯನ್ನು ತನ್ನ ಹಳ್ಳಿಯಿಂದ 60 ವರ್ಷದ ನೆರೆಹೊರೆಯ ವೃದ್ಧನೊಬ್ಬ ಕರೆದೊಯ್ದು ನಂತರ ಪಂಜಾಬ್ ಮೂಲದವನಿಗೆ ಮಾರಿದ್ದನು. ಆದ್ರೆ, ಸಂತ್ರಸ್ತೆ ಅಲ್ಲಿಂದ ತಪ್ಪಿಸಿಕೊಂಡು ದೆಹಲಿ ಸೇರಿ ಕಳೆದ ಎರಡು ತಿಂಗಳಿನಿಂದ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ವಾಸಿಸುತ್ತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೈದ್ಯಕೀಯ ಪರೀಕ್ಷೆಯ ವರದಿಗಳ ಪ್ರಕಾರ ಅಪ್ರಾಪ್ತ ವಯಸ್ಸಿನ ಬಾಲಕಿ 2018 ರಿಂದಲೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ. ವೈದ್ಯಕೀಯ ಪರೀಕ್ಷೆಯ ನಂತರ ಈ ಬಾಲಕಿ 13 ವಾರಗಳ ಗರ್ಭಿಣಿ ಎಂದು ತಿಳಿದುಬಂದಿದೆ ಎಂದು ಡಿಸಿಪಿಸಿಆರ್ ಅಧಿಕಾರಿ ಜ್ಯೋತಿ ತಿಳಿಸಿದ್ದಾರೆ.
ಇನ್ನು, ಈ ಬಗ್ಗೆ ಅಸ್ಸೋಂ ಪೊಲೀಸರು ತನಿಖೆ ನಡೆಸಿದಾಗ, ಆಕೆಯ ತಂದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಲ್ಕು ವರ್ಷಗಳ ಹಿಂದೆ ನಾಪತ್ತೆಯಾದ ಬಗ್ಗೆ ದೂರು ನೀಡಿದ್ದರು ಎಂದು ತಿಳಿದುಬಂದಿದೆ.
ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗವು ಬಾಲಕಿಯ ಗರ್ಭ ತೆಗಿಸುವ ಬಗ್ಗೆ ತಾಯಿಯ ಒಪ್ಪಿಗೆಯನ್ನು ಪಡೆದುಕೊಂಡಿದ್ದು, ಬಾಲಕಿಯ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗವು, ಲಾಕ್‌ಡೌನ್ ಮುಗಿದ ನಂತರ ನಾವು ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಅಗತ್ಯವಾದ ವ್ಯವಸ್ಥೆಗಳನ್ನು ಮಾಡುತ್ತೇವೆ ಎಂದು ತಿಳಿಸಿದ್ದಾರೆ.