ನವದೆಹಲಿ: ದೆಹಲಿ ವಿಧಾನಸಭೆಗೆ ಮುಂದಿನ ತಿಂಗಳು ಚುನಾವಣೆ ನಡೆಯಲಿದೆ. ಆಡಳಿತಾರೂಢ ಆಮ್ ಆದ್ಮಿ ಪಕ್ಷ, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷ ಗೆಲುವಿಗಾಗಿ ತಂತ್ರ-ರಣತಂತ್ರ ಹೆಣೆಯುತ್ತಿವೆ. ಎಲ್ಲ ಪಕ್ಷಗಳು ಗೆಲ್ಲುವ ಕುದುರೆಗಳಿಗೆ ಮಣೆ ಹಾಕುತ್ತಿವೆ. ಗದ್ದುಗೆಗಾಗಿ ನಡೆಯುತ್ತಿರುವ ಈ ಗುದ್ದಾಟದ ವೇಳೆಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟಿಕೆಟ್ ಹಂಚಿಕೆಗೆ ಕೋಟಿಗಟ್ಟಲೆ ದುಡ್ಡು ಕೇಳಿದ್ದಾರೆ ಎಂದು ಶಾಸಕ ಆದರ್ಶ ಶಾಸ್ತ್ರಿ ಗಂಭೀರ ಆರೋಪ ಮಾಡಿದ್ದಾರೆ.
ಆಪ್ ಶಾಸಕ ಆದರ್ಶ ಶಾಸ್ತ್ರಿ ಕಾಂಗ್ರೆಸ್ ಸೇರಿದ್ದು ಎಎಪಿ ಮೇಲೆ ಗಂಭೀರ ಆರೋಪ ಹೊರಿಸಿದ್ದಾರೆ. 2020 ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಪ್ನಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಿಂದ ಕೇಜ್ರಿವಾಲ್ 10ರಿಂದ20 ಕೋಟಿ ರೂ ಹಣ ಪಡೆದುಕೊಳ್ಳುತ್ತಿದ್ದಾರೆ ಎಂದು ದ್ವಾರಕಾ ನಗರದ ಎಂಎಲ್ಎ ದೂರಿದ್ದಾರೆ. ನಾನು ಎಎಪಿಯಿಂದ ಸ್ಪರ್ಧಿಸಲು ಟಿಕೆಟ್ ಕೇಳಿದ್ದೆ. ಆಗ ಅವರು ನನ್ನ ಬಳಿ 10 ಕೋಟಿ ರೂ ಹಣ ಕೊಟ್ಟರೆ ಮಾತ್ರ ಟಿಕೆಟ್ ಎಂದಿದ್ದರು ಎಂಬ ಬಾಂಬ್ ಸಿಡಿಸಿದ್ದಾರೆ.
ದ್ವಾರಕಾ ಕ್ಷೇತ್ರದಿಂದ ಅವರಿಗೆ ಶಾಸ್ತ್ರಿ ಅವರಿಗೆ ಆಪ್ ಟಿಕೆಟ್ ನಿರಾಕರಿಸಿತ್ತು. ಹೀಗಾಗಿ ಕಾಂಗ್ರೆಸ್ ಸೇರಿ ಸ್ಪರ್ಧಿಸಲು ಅವರು ನಿರ್ಧರಿಸಿದ್ದಾರೆ. ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿ ಮೊಮ್ಮಗನಾಗಿರುವ ಆದರ್ಶ ಶಾಸ್ತ್ರಿ ಇದೀಗ ಕಾಂಗ್ರೆಸ್ ತೆಕ್ಕೆಯಲ್ಲಿದ್ದು ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ.