ಶ್ರೀನಗರ: ಕಣಿವೆ ನಾಡು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370 ರದ್ದುಗೊಂಡಿದ್ದು, ಇದಕ್ಕೆ ವಿಪಕ್ಷಗಳ ಕೆಲ ನಾಯಕರು ವಿರೋಧ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಕೇಂದ್ರದ ನಡೆಯನ್ನು ಸ್ವಾಗತಿಸಿದ್ದಾರೆ.
ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ನ ಹಿರಿಯ ಮುಖಂಡ ಹಾಗೂ ಜಮ್ಮು-ಕಾಶ್ಮೀರದ ಕೊನೆಯ ಸದರ್-ಎ-ರಿಯಾಸತ್ ಕರಣ್ ಸಿಂಗ್ ಕೇಂದ್ರದ ನಡೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರದಲ್ಲಿ ಅನೇಕ ಸಕಾರಾತ್ಮಕ ಅಂಶಗಳನ್ನೊಳಗೊಂಡಿದ್ದು, ಲಡಾಕ್ ಪ್ರದೇಶವನ್ನ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಿರುವುದು ನಿಜಕ್ಕೂ ಸ್ವಾಗತಾರ್ಹ ಎಂದು 88 ವರ್ಷದ ಕರಣ್ ಸಿಂಗ್ ಹೇಳಿದ್ದಾರೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪತ್ರ ಬರೆದು ಮಾಹಿತಿ ನೀಡಿರುವ ಕರಣ್ ಸಿಂಗ್, ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಅಧಿಕಾರದ ಆರ್ಟಿಕಲ್ 370 ರದ್ದು ಮಾಡಿರುವುದರಿಂದ ರಾಜಕೀಯ ಅಧಿಕಾರ ನ್ಯಾಯಯುತವಾಗಿ ಹಂಚಿಕೆಯಾಗಲಿದ್ದು, ಇನ್ಮುಂದೆ ಕೇಂದ್ರಾಡಳಿತ ಪ್ರದೇಶಗಳಿಗೆ ಎಲ್ಲ ರೀತಿಯ ಸೌಲಭ್ಯ ಸಿಗಲಿವೆ ಎಂದಿರುವ ಅವರು, ಜಮ್ಮು-ಕಾಶ್ಮೀರ ಆದಷ್ಟು ಬೇಗ ಪೂರ್ಣ ರಾಜ್ಯತ್ವವನ್ನು ಪಡೆಯಬೇಕು, ಇದರಿಂದಾಗಿ ದೇಶದ ಜನರು ದೇಶದ ಉಳಿದ ಭಾಗಗಳಿಗೆ ಲಭ್ಯವಿರುವ ರಾಜಕೀಯ ಹಕ್ಕುಗಳನ್ನು ಪಡೆಯಬಹುದು ಎಂದು ತಿಳಿಸಿದ್ದಾರೆ.
ಇನ್ನು 1947ರಲ್ಲಿ ಕರಣ್ ಸಿಂಗ್ ಅವರ ತಂದೆ ಮಹಾರಾಜ ಹರಿಸಿಂಗ್ ದೇಶಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ಕಾಶ್ಮೀರ ಸ್ವತಂತ್ರವಾಗಿ ಉಳಿಯಲು ಬಯಸಿದ್ದರು ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ.