ಶ್ರೀನಗರ (ಜಮ್ಮು ಕಾಶ್ಮೀರ): ಭಯೋತ್ಪಾದಕರಿಗಾಗಿ ನಡೆದ ಶೋಧ ಕಾರ್ಯಾಚರಣೆ ವೇಳೆ ಭಾರತೀಯ ಯೋಧ ಹುತಾತ್ಮನಾಗಿದ್ದಾನೆ ಎಂದು ರಕ್ಷಣಾ ವಕ್ತಾರರೊಬ್ಬರು ಭಾನುವಾರ ಮಾಹಿತಿ ನೀಡಿದ್ದಾರೆ.
ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಝೈನಾಪೋರಾದಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ ಅನಂತ್ ನಾಗ್ ಜಿಲ್ಲೆಯ ಯೋಧ ಅಬ್ದುಲ್ ಮಜೀದ್ ದಾರ್ ಎತ್ತರದ ಭಾಗದಿಂದ ಆಕಸ್ಮಿಕವಾಗಿ ಉರುಳಿ ಹುತಾತ್ಮನಾಗಿದ್ದಾನೆ ಎಂದು ರಕ್ಷಣಾ ವಕ್ತಾರರಾದ ರಾಜೇಶ್ ಕಾಲಿಯಾ ಹೇಳಿದ್ದಾರೆ.
ಓದಿ: ಶರಣಾಗಲು ಭಯೋತ್ಪಾದಕರ ನಿರಾಕರಣೆ: ಪೂಂಚ್ನಲ್ಲಿ ಸೇನೆಯಿಂದ ಎನ್ಕೌಂಟರ್
ಮೊದಲಿಗೆ ಗಾಯಗೊಂಡಿದ್ದ ಅಬ್ದುಲ್ ಮಜೀದ್ ದಾರ್ ಅನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೇನಾ ಆಸ್ಪತ್ರೆಯಲ್ಲಿ ಯೋಧ ಹುತಾತ್ಮನಾಗಿದ್ದಾನೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಹುತಾತ್ಮ ಯೋಧನಿಗೆ ಸೇನೆಯ ಬಡಾಮಿಬಾಗ್ ಕಂಟೋನ್ಮೆಂಟ್ ಪ್ರದೇಶದಲ್ಲಿ ಅಂತಿಮ ನಮನ ಸಲ್ಲಿಸಲಾಗಿದೆ. ಅಬ್ದುಲ್ ಮಜೀದ್ ದಾರ್ 2004ರಲ್ಲಿ ಸೇನೆಗೆ ಸೇರ್ಪಡೆಯಾಗಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹೊಂದಿದ್ದರು.