ಶ್ರೀನಗರ: ಸೇನಾ ಮುಖ್ಯಸ್ಥ ಮನೋಜ್ ಮುಕುಂದ ನರವಣೆ ಗುರುವಾರ ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ. ನಿಯಂತ್ರಣ ರೇಖೆ ಬಳಿ ಪಾಕಿಸ್ತಾನದಿಂದ ಪದೇ ಪದೇ ಕದನ ವಿರಾಮ ಉಲ್ಲಂಘನೆ ಹಾಗೂ ಹೆಚ್ಚುತ್ತಿರುವ ಉಗ್ರರ ಒಳನುಸುಳುವಿಕೆ ಹಿನ್ನೆಲೆಯಲ್ಲಿ ಭಾರತದ ರಕ್ಷಣಾ ಪಡೆಗಳ ಪೂರ್ವ ಸಿದ್ಧತೆಗಳ ಕುರಿತು ಅವರು ಪರಿಶೀಲನೆ ನಡೆಸಲಿದ್ದಾರೆ ಎಂದು ಸೇನಾ ಅಧಿಕಾರಿಗಳ ಮೂಲಗಳು ಹೇಳಿವೆ.
'ಭಯೋತ್ಪಾದನಾ ನಿಗ್ರಹ ಮತ್ತು ಉಗ್ರರ ಒಳನುಸುಳುವಿಕೆ ತಡೆಗೆ 15 ಕೋರ್ ಭದ್ರತಾ ಪಡೆಗಳು ನಡೆಸುತ್ತಿರುವ ಕಾರ್ಯಾಚರಣೆಗಳ ಬಗ್ಗೆ ಪರಿಶೀಲನೆ ನಡೆಸಲು ಹಾಗೂ ನಿಯಂತ್ರಣ ರೇಖೆಯ ಬಳಿ ಭಾರತದ ಪಡೆಗಳ ಯುದ್ಧಸಿದ್ಧತೆಗಳ ಪರಿಶೀಲನೆಗಾಗಿ ಸೇನಾ ಮುಖ್ಯಸ್ಥರು ಗುರುವಾರ ಇಲ್ಲಿಗೆ ಆಗಮಿಸಲಿದ್ದಾರೆ." ಎಂದು ರಕ್ಷಣಾ ಪಡೆ ವಕ್ತಾರ ಕರ್ನಲ್ ರಾಜೇಶ ಕಾಲಿಯಾ ಈಟಿವಿ ಭಾರತ್ಗೆ ಮಾಹಿತಿ ನೀಡಿದರು.
'ಉಗ್ರವಾದಿಗಳನ್ನು ಭಾರತದೊಳಗೆ ನುಸುಳುವಂತೆ ಮಾಡಲು ಶತ್ರುರಾಷ್ಟ್ರ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿದೆ.' ಎಂದು ಅವರು ಹೇಳಿದರು.
ಪಾಕಿಸ್ತಾನದಲ್ಲಿನ ಉಗ್ರರ ಶಿಬಿರಗಳ ಮೇಲೆ ಭಾರತ ಇತ್ತೀಚೆಗೆ ಕರಾರುವಾಕ್ ದಾಳಿ ನಡೆಸಿತ್ತು. ಈ ಕುರಿತು ಮಾಹಿತಿ ನೀಡಿದ ಕರ್ನಲ್ ಕಾಲಿಯಾ, 'ಕದನವಿರಾಮದ ಉಲ್ಲಂಘನೆಗೆ ಪ್ರತೀಕಾರವಾಗಿ ಕುಪ್ವಾರಾದ ಕೇರನ್ ಸೆಕ್ಟರ್ನಲ್ಲಿ ದಾಳಿ ನಡೆಸಲಾಗಿತ್ತು.' ಎಂದರು.
ಕೇರನ್ ಸೆಕ್ಟರ್ನಲ್ಲಿ ಏ.5 ರಂದು ನಡೆದ ಭಾರಿ ಗುಂಡಿನ ಚಕಮಕಿಯಲ್ಲಿ ಭಾರತೀಯ ಯೋಧರು ಐವರು ಉಗ್ರವಾದಿಗಳನ್ನು ಮಟ್ಟ ಹಾಕಿದ್ದರು. ಕಾರ್ಯಾಚರಣೆಯಲ್ಲಿ ಭಾರತದ ಪ್ಯಾರಾ ಎಸ್ಎಫ್ ಕಮಾಂಡೊಗಳು ಹುತಾತ್ಮರಾಗಿದ್ದರು.
ಅಧಿಕೃತ ಅಂಕಿ ಅಂಶಗಳ ಪ್ರಕಾರ ಪ್ರಸಕ್ತ ವರ್ಷ 1,200 ಕದನ ವಿರಾಮ ಉಲ್ಲಂಘನೆ ಪ್ರಕರಣಗಳು ನಡೆದಿವೆ. ಕಳೆದ ವರ್ಷ 3,479 ಬಾರಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಶೆಲ್ ದಾಳಿ ನಡೆಸಿತ್ತು.