ನವದೆಹಲಿ: ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಮಂಗಳವಾರ ಜಪಾನ್‌ಗೆ ಮೂರು ದಿನಗಳ ಕಾಲ ಅಧಿಕೃತ ಭೇಟಿ ಕೈಗೊಳ್ಳಲಿದ್ದು, ಜಪಾನ್ ರಕ್ಷಣಾ ಸಚಿವ ತಾರೊ ಕೊನೊ ಅವರನ್ನು ಭೇಟಿ ಮಾಡಿ ಪರಸ್ಪರ ಹಿತಾಸಕ್ತಿ ಕುರಿತು ಚರ್ಚಿಸಲಿದ್ದಾರೆ.
ಭೇಟಿಯಲ್ಲಿ ಸೇನಾ ಮುಖ್ಯಸ್ಥರ ನೇತೃತ್ವದ ನಿಯೋಗವು ಉಭಯ ದೇಶಗಳ ನಡುವಿನ ರಕ್ಷಣಾ ಸಂಬಂಧಗಳನ್ನು ಬಲಪಡಿಸುವ ಉದ್ದೇಶದಿಂದ ಜಪಾನಿನ ಸ್ವರಕ್ಷಣಾ ಪಡೆಗಳ ಉನ್ನತ ಅಧಿಕಾರಿಗಳೊಂದಿಗೆ ಸಂವಹನ ನಡೆಸಲಿದೆ.
ಅಲ್ಲದೇ ಬಿಪಿನ್ ರಾವತ್ ಅವರು, ಇತ್ತೀಚೆಗೆ ಮಿಜೋರಾಂನ ವೈರೆಂಗ್ಟೆಯಲ್ಲಿ ನಡೆದ ಇಂಡೋ-ಜಪಾನ್ ಜಂಟಿ ವ್ಯಾಯಾಮ 'ಧರ್ಮ ಗಾರ್ಡಿಯನ್'ನಲ್ಲಿ ಭಾಗವಹಿಸಿದ್ದ ಜಪಾನ್ ಗ್ರೌಂಡ್ ಸೆಲ್ಫ್ ಡಿಫೆನ್ಸ್ ಫೋರ್ಸ್ನ ಸೈನಿಕರೊಂದಿಗೆ ಸಂವಹನ ನಡೆಸಲಿದ್ದಾರೆ.
ಭಾರತ ಮತ್ತು ಜಪಾನ್ 2+2 ಸಂವಾದವನ್ನು ಮುಕ್ತಾಯಗೊಳಿಸಿದ ಬೆನ್ನಲ್ಲೇ ರಾವತ್ ಜಪಾನ್‌ಗೆ ಭೇಟಿ ನೀಡುತ್ತಿದ್ದು, ರಾವತ್ ಅವರ ಈ ಭೇಟಿ ಭಾರತ-ಜಪಾನ್ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎನ್ನಲಾಗುತ್ತಿದೆ.
ಶನಿವಾರ ನಡೆದ 'ಭಾರತ-ಜಪಾನ್ ವಿದೇಶಾಂಗ ಮತ್ತು ರಕ್ಷಣಾ ಸಚಿವರ ಸಂವಾದದಲ್ಲಿ (2+2)ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಜಪಾನ್ ವಿದೇಶಾಂಗ ವ್ಯವಹಾರಗಳ ಸಚಿವ ತೋಶಿಮಿಟ್ಸು ಮೊಟೆಗಿ ಮತ್ತು ರಕ್ಷಣಾ ಸಚಿವ ತಾರೊ ಕೊನೊ ಮಾತುಕತೆ ನಡೆಸಿದ್ದರು.
ಜಪಾನ್ ಪ್ರಧಾನಿ ಶಿಂಜೊ ಅಬೆ ಈ ತಿಂಗಳ ಕೊನೆಯಲ್ಲಿ ಭಾರತಕ್ಕೆ ಭೇಟಿ ನೀಡಲಿರುವ ಕಾರಣ ಸೇನಾ ಮುಖ್ಯಸ್ಥರ ಈ ಭೇಟಿಯೂ ಮಹತ್ವ ಪಡೆದುಕೊಂಡಿದೆ.