ಕೋಲ್ಕತ್ತಾ : ಸುಪ್ರೀಂಕೋರ್ಟ್ ನಿರ್ದೇಶನ ಅನುಸಾರ ನಡೆಯುತ್ತಿರುವ ಶಾರದಾ ಚಿಟ್ ಫಂಡ್ ಹಗರಣದ ತನಿಖೆಯಲ್ಲಿ ಹಸ್ತಕ್ಷೇಪ ನಡೆಯುತ್ತಿದೆ ಎಂದು ಅಂತಕ ವ್ಯಕ್ತಪಡಿಸಿ, ಪಶ್ಚಿಮ ಬಂಗಾಳದ ಮಾಜಿ ಸಚಿವ ಮತ್ತು ತೃಣಮೂಲ ಕಾಂಗ್ರೆಸ್ ಮುಖಂಡ ಸುವೇಂದು ಅಧಿಕಾರಿ ಕೇಂದ್ರ ತನಿಖಾ ಸಂಸ್ಥೆ (ಸಿಬಿಐ ) ಗೆ ಪ್ರಶ್ನಿಸಿದ್ದಾರೆ.
ಪ್ರಕರಣದ ಆರೋಪಿ, ಶಾರದಾ ಗ್ರೂಪ್ ಮುಖ್ಯಸ್ಥ ಸುದೀಪ್ತಾ ಸೇನ್ ಜೈಲಿನಿಂದ ಬರೆದ ಪತ್ರ ಹೇಗೆ ಮಾಧ್ಯಮಗಳ ಕೈ ಸೇರಿತು ಎಂದು ಸುವೇಂದು ಅಧಿಕಾರಿ ಸಿಬಿಐಯನ್ನು ಪ್ರಶ್ನಿಸಿದ್ದು, ಸುದೀಪ್ತಾ ಸೇನ್ ಪತ್ರದ ಹಿಂದೆ ಜೈಲಿನ ಅಧಿಕಾರಿಗಳ ಸಹಕಾರ ಮತ್ತು ಪ್ರಭಾವಿಗಳ ಕೈವಾಡ ಇರುವ ಅನುಮಾನವಿದೆ ಎಂದು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ : ಸಿಎಸ್, ಡಿಜಿಪಿ ದೆಹಲಿಗೆ ಹೋಗಲ್ಲ; ಗೃಹ ಸಚಿವಾಲಯದ ಸಮನ್ಸ್ ಗೆ ಬಂಗಾಳ ಸರ್ಕಾರದ ಸವಾಲ್
ಸುದೀಪ್ತಾ ಸೇನ್ ಬರೆದಿರುವ ಪತ್ರದಲ್ಲಿ, ಸುವೇಂದು ಅಧಿಕಾರಿ ಸೇರಿದಂತೆ ವಿವಿಧ ಪಕ್ಷಗಳ ಐವರು ರಾಜಕಾರಣಿಗಳು ತಮ್ಮಿಂದ ಅಪಾರ ಪ್ರಮಾಣದ ಹಣ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣವು ಮೊದಲು 2013 ರಲ್ಲಿ ಬೆಳಕಿಗೆ ಬಂದಿತು. ಅಂದಿನಿಂದ ಸಿಬಿಐ ಹಗರಣದ ತನಿಖೆ ನಡೆಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಂದು ಡಜನ್‌ಗೂ ಹೆಚ್ಚು ಟಿಎಂಸಿ ಶಾಸಕರು, ಸಚಿವರು ಮತ್ತು ಸಂಸದರನ್ನು ಸಿಬಿಐ ವಿಚಾರಣೆ ನಡೆಸಿದೆ. ಕೆಲ ನಾಯಕರು ನೇರವಾಗಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗ್ತಿದೆ.