ಎಲೂರು: ಆಂಧ್ರ ಪ್ರದೇಶದ ಎಲೂರಿನಲ್ಲಿ 561 ಮಂದಿಯನ್ನು ಅಸ್ವಸ್ಥಗೊಳಿಸಿ ಓರ್ವನನ್ನು ಬಲಿ ತೆಗೆದುಕೊಂಡು ಬಾರಿ ಸುದ್ದಿಗೆ ಗ್ರಾಸವಾಗಿರುವ ನಿಗೂಢ ಕಾಯಿಲೆಯ ಕಾರಣ ಪ್ರಾಥಮಿಕ ವರದಿಯಲ್ಲಿ ಬಹಿರಂಗವಾಗಿದೆ.
ಪಶ್ಚಿಮ ಗೋದಾವರಿ ಜಿಲ್ಲಾ ಕೇಂದ್ರವಾದ ಎಲೂರಿನಲ್ಲಿ ಶನಿವಾರ ಈ ಘಟನೆ ಸಂಭವಿಸಿತ್ತು. ಇಡೀ ಊರಿನ ನಿವಾಸಿಗಳು ದಿಢೀರನೇ ಅಸ್ವಸ್ಥರಾದರು. ನಿವಾಸಿಗಳಲ್ಲಿ ವಾಂತಿ, ತೀವ್ರ ಚಳಿ ಮತ್ತು ತಲೆನೋವು ಕಾಣಿಸಿಕೊಂಡಿತ್ತು. ಅಸ್ವಸ್ಥರಾಗಿದ್ದ ಗ್ರಾಮಸ್ಥರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿಗೂಢ ಕಾಯಿಲೆಗೆ ಸುಮಾರು 561 ಜನರು ಅಸ್ವಸ್ಥರಾಗಿದ್ದು, ಓರ್ವ ಮೃತಪಟ್ಟಿದ್ದಾನೆ.
ಕಾಯಿಲೆಯ ಕಾರಣ ಪತ್ತೆಗೆ ಮಾದರಿ ಪರೀಕ್ಷೆಗಳನ್ನು ನಡೆಸಿದ್ದರಿಂದ ರಕ್ತದಲ್ಲಿ ಸೀಸ ಮತ್ತು ನಿಕ್ಕಲ್, ಕುಡಿಯುವ ನೀರಿನಲ್ಲಿ ಕೀಟನಾಶಕ ಇರುವುದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ. ನೀರಿನಲ್ಲಿ ಇ-ಕೋಲಿ ಇರುವುದು ಅಂಶ ಸಾಮಾನ್ಯ ಎಂಬುದು ಕಂಡುಬಂದಿದೆ.
ಕಾಯಿಲೆಯ ಏಕಾಏಕಿ ಹೇಗೆ ಉಂಟಾಯಿತು ಎಂಬುದರ ರೋಗಕಾರಕಗಳ ಬಗ್ಗೆ ಸಮಗ್ರ ವರದಿಗೆ ಸುಮಾರು ಒಂದು ವಾರ ಕಾಯಬೇಕಿದೆ. ನಾನಾ ಏಜೆನ್ಸಿ ಮತ್ತು ಸಂಸ್ಥೆಗಳ ತಂಡಗಳು ಹೆಚ್ಚಿನ ವಿಶ್ಲೇಷಣೆಗಾಗಿ ನೀರು, ಆಹಾರ ಮತ್ತು ರಕ್ತದ ಮಾದರಿಗಳನ್ನು ಸಂಗ್ರಹಿಸಲು ಮುಂದಾಗಿವೆ.
ಫಲ ನೀಡದ ಅಮಿತ್ ಶಾ ಸಂಧಾನ: ಇಂದು ನಡೆಯಬೇಕಿದ್ದ ಕೇಂದ್ರ ಸರ್ಕಾರ-ರೈತರ ಸಭೆ ರದ್ದು
ರಕ್ತದ ಮಾದರಿಗಳ ಪ್ರಾಥಮಿಕ ಪರೀಕ್ಷೆಯನ್ನು ನಡೆಸಿದ ಏಮ್ಸ್ ತಜ್ಞರು, ಸೀಸ ಮತ್ತು ನಿಕ್ಕಲ್ ಕಣಗಳು ನಿಗೂಢಕಾಯಿಲೆಯ ಮೂಲ ಕಾರಣವಾಗಿರಬಹುದು. ಇದರಿಂದಾಗಿ 561 ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದಿದೆ.
ಮಂಗಳವಾರ ರೋಗದ ಹರಡುವಿಕೆ ಕಡಿಮೆ ಆಗಿದ್ದು, ಕೇವಲ 73 ಹೊಸ ಪ್ರಕರಣಗಳು ವರದಿಯಾಗಿವೆ.
ದೆಹಲಿ ಏಮ್ಸ್ನ ಮತ್ತೊಂದು ತಂಡವು ನೀರು ಮತ್ತು ಆಹಾರದ ಮಾದರಿಗಳನ್ನು ಪರೀಕ್ಷಿಸುವ ಮೂಲಕ ಭಾರವಾದ ಲೋಹಗಳು ಹೇಗೆ ಪ್ರವೇಶಿಸುತ್ತವೆ ಎಂಬುದನ್ನು ಪರಿಶೀಲಿಸುತ್ತಿದೆ. ಹೈದರಾಬಾದ್ ಮೂಲದ ಸೆಲ್ಯುಲಾರ್ ಮತ್ತು ಆಣ್ವಿಕ ಜೀವಶಾಸ್ತ್ರ ಕೇಂದ್ರವು ವೈರಲ್ ಮತ್ತು ಬ್ಯಾಕ್ಟೀರಿಯೊಲಾಜಿಕಲ್ ವಿಶ್ಲೇಷಣೆಗಾಗಿ ಸಂತ್ರಸ್ತರ ಮಲ ಮತ್ತು ಪಿತ್ತರಸ ಮಾದರಿಗಳನ್ನು ಕೋರಿದೆ.
ಎಲೂರಿನಿಂದ ಸಂಗ್ರಹಿಸಿದ ತರಕಾರಿ ಮಾದರಿಗಳನ್ನು ಹೈದರಾಬಾದ್‌ನ ನ್ಯಾಷನಲ್ ಇನ್ಟ್ಯೂಟ್ ಆಫ್ ನ್ಯೂಟ್ರಿಷನ್‌ಗೆ ಕಳುಹಿಸಲಾಗಿದೆ. ರಕ್ತದ ಸೀರಮ್ ಮಾದರಿಗಳನ್ನು ರಾಸಾಯನಿಕ ವಿಶ್ಲೇಷಣೆಗಾಗಿ ಭಾರತೀಯ ರಾಸಾಯನಿಕ ತಂತ್ರಜ್ಞಾನ ಸಂಸ್ಥೆಗೆ ಕಳುಹಿಸಲಾಗಿದೆ. ಫಲಿತಾಂಶಕ್ಕಾಗಿ ಎದುರು ನೋಡಲಾಗುತ್ತಿದೆ ಎಂದು ಅಧಿಕೃತ ವರದಿ ತಿಳಿಸಿದೆ.