ಅಮರಾವತಿ: ಕೊರೊನಾ ಪ್ರಭಾವವಿಲ್ಲದ ಪ್ರದೇಶಗಳಲ್ಲಿ ಲಾಕ್ಡೌನ್ ಸಡಿಲಗೊಳಿಸಿ, ರೆಡ್ ಜೋನ್ ಹಾಗೂ ಆರೆಂಜ್ ಜೋನ್ ಇರುವಲ್ಲಿ ಲಾಕ್ಡೌನ್ ಮುಂದುವರಿಸುವ ಆಲೋಚನೆ ವ್ಯಕ್ತಪಡಿಸಿಯೂ, ಆಂಧ್ರ ಸಿಎಂ ಜಗನ್ಮೋಹನ್ ರೆಡ್ಡಿ ಪ್ರಧಾನಿ ನರೇಂದ್ರ ಮೋದಿಯವರ ಸೂಚನೆ ಪಾಲಿಸುವುದಾಗಿ ತಿಳಿಸಿದ್ದಾರೆ.
ಕೊರೊನಾ ತಡೆಗೆ ಶನಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳ ಜೊತೆ ನಡೆದ ಸಭೆಯಲ್ಲಿ ಜಗನ್ಮೋಹನ್ ರೆಡ್ಡಿ ಕೊರೊನಾ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಳ್ಳುವ ನಿರ್ಧಾರವನ್ನು ರಾಜ್ಯದಲ್ಲಿ ಅಳವಡಿಸಲಿದ್ದೇವೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಒಟ್ಟು ದೇಶೀಯ ಉತ್ಪನ್ನದ(ಜಿಎಸ್ಡಿಪಿ) ಶೇ. 35 ರಷ್ಟು ಕೃಷಿವಲಯದಿಂದ ಬರುತ್ತಿದೆ. ಕೃಷಿ ವಲಯದಲ್ಲಿ ಶೇ.65 ರಷ್ಟು ಉದ್ಯೋಗಿಗಳಿದ್ದಾರೆ ಎಂದ ಜಗನ್, ಪ್ರಸ್ತುತ ಪರಿಸ್ಥಿತಿ ಹೀಗೆ ಮುಂದುವರಿದರೆ ಲಕ್ಷಾಂತರ ಕೃಷಿ ಕುಟುಂಬಗಳು ನಿರ್ಗತಿಕರಾಗುತ್ತಾರೆ ಎಂದು ಸಭೆಯಲ್ಲಿ ರೈತರ ಪರ ಧ್ವನಿ ಎತ್ತಿದರು.
ಇನ್ನು ರಾಜ್ಯದಲ್ಲಿನ ಕೊವಿಡ್ 19 ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ 141 ಕ್ಲಸ್ಟರ್ಗಳನ್ನು ಕೊರೊನಾಧಾರಕ ವಲಯ ಎಂದು ಗುರುತಿಸಲಾಗಿದೆ. ರಾಜ್ಯದಲ್ಲಿರುವ 676 ಮಂಡಳಿಗಳಲ್ಲಿ 37 ರೆಡ್ ಜೋನ್ ಅಥವಾ ತೀವ್ರ ಕೊರೊನಾ ಬಾಧಿತ ಪ್ರದೇಶ, 44 ಆರೆಂಜ್ ಜೋನ್ಗಳು ಭಾಗಶಃ ಪರಿಣಾಮ ಬೀರುತ್ತಿರುವ ಪ್ರದೇಶಗಳಾಗಿವೆ ಎಂದು ತಿಳಿಸುವ ಮೂಲಕ ಸಭೆಯ ಗಮನ ಸೆಳೆದರು.
676 ಮಂಡಲ್ಗಳಲ್ಲಿ 81 ರೆಡ್ ಮತ್ತು ಆರೆಂಜ್ ಜೋನ್ನಲ್ಲಿವೆ. ಉಳಿದ ಮಂಡಲ್ಗಳಲ್ಲಿ ಕೊರೊನಾ ಪರಿಣಾಮ ಬೀರಿಲ್ಲ. ಅವುಗಳನ್ನು ಗ್ರೀನ್ ಜೋನ್ ಎಂದು ವಿಭಾಗಿಸಲಾಗಿದೆ ಎಂದು ತಿಳಿಸಿದ ಅವರು ಲಾಕ್ಡೌನ್ ಅನ್ನು ರೆಡ್ ಮತ್ತು ಆರಂಜ್ ಜೋನ್ಗಳಲ್ಲಿ ಮಾತ್ರ ಮುಂದುವರಿಸಿ, ಸಾಮಾಜಿಕ ಅಂತರವನ್ನು ಉಳಿದ ಕಡೆ ಮುಂದುವರಿಸುವುದಾಗಿ ತಮ್ಮ ಅಭಿಪ್ರಾಯ ತಿಳಿಸಿದರು. ಆದರೆ ಇಡೀ ದೇಶ ಒಂದೇ ಯೋಜನೆಯೊಂದಿಗೆ ಮುಂದುವರಿದರೆ ಅನುಕೂಲವಾಗುವುದರಿಂದ, ಕೇಂದ್ರ ಸರ್ಕಾರದ ನಿರ್ಧಾರಕ್ಕೆ ನಾವು ಬದ್ಧ ಎಂದು ಜಗನ್ ತಿಳಿಸಿದ್ದಾರೆ.