ನವದೆಹಲಿ : ಅಂತಾರಾಷ್ಟ್ರೀಯ ತೈಲ ದರಗಳ ಪರಿಷ್ಕರಣೆಯು ಮತ್ತೆ ಆರಂಭವಾಗಿದೆ. ದೇಶೀಯ ಇಂಧನ ಚಿಲ್ಲರೆ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ದರ ಮತ್ತೆ ಹೆಚ್ಚಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ 24 ಪೈಸೆ, ಡೀಸೆಲ್ ದರ 27 ಪೈಸೆ ಹೆಚ್ಚಳವಾಗಿದೆ. ಲೀಟರ್ ಪೆಟ್ರೋಲ್ಗೆ 82.13 ರೂ. ಹಾಗೂ ಲೀಟರ್ ಡೀಸೆಲ್ಗೆ 72.13 ರೂ. ಕೊಟ್ಟು ಗ್ರಾಹಕರು ಖರೀದಿಸುತ್ತಿದ್ದಾರೆ.
ಸುಮಾರು 2 ತಿಂಗಳ ವಿರಾಮದ ಬಳಿಕ ತೈಲ ಕಂಪನಿಗಳು ಪೆಟ್ರೋಲಿಯಂ ಉತ್ಪನ್ನಗಳ ಪಂಪ್ ಬೆಲೆಯನ್ನು ಹೆಚ್ಚಿಸಿವೆ. ಕಳೆದ ಐದು ದಿನಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ಗೆ 53 ಪೈಸೆ, ಡೀಸೆಲ್ಗೆ 95 ಪೈಸೆ ಹೆಚ್ಚಳವಾಗಿದೆ. ನವೆಂಬರ್ 20ರಿಂದ ಈವರೆಗೆ ಪೆಟ್ರೋಲ್ ಬೆಲೆ 1.07 ರೂಪಾಯಿ ಹೆಚ್ಚಾಗಿದೆ.
ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರವರೆಗೆ ತೈಲ ಬೆಲೆ ಸ್ಥಿರವಾಗಿತ್ತು. ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ದರ ನಿಯಂತ್ರಿಸಿ, ದೈನಂದಿನ ಬೆಲೆ ಪರಿಷ್ಕರಣೆ ಸೂತ್ರವನ್ನು ಅನುಸರಿಸುತ್ತಿದ್ದವು.
ಕೋವಿಡ್ ಸಮಯದಲ್ಲಿ ಇಂಧನ ಬೆಲೆಗಳ ಮೇಲೆ ಪರಿಣಾಮ ಬೀರದಂತೆ ಎರಡು ತಿಂಗಳಿಂದ ತೈಲ ಬೆಲೆಯನ್ನು ಸ್ಥಿರವಾಗಿರಿಸಲಾಗಿತ್ತು. ಆದರೆ, ಶೀಘ್ರದಲ್ಲೇ ಕೋವಿಡ್ ವ್ಯಾಕ್ಸಿನ್ ಬಿಡುಗಡೆ ಎಂದು ಸುದ್ದಿ ಹರಿದಾಡುತ್ತಿದ್ದಂತೆ, ಒಎಂಸಿಗಳು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಸಿವೆ.