ನವದೆಹಲಿ: ದೇಶದ ಪ್ರತಿಷ್ಠತ ಬ್ಯಾಂಕ್ ಎಸ್ಬಿಐ ಸೇರಿದಂತೆ ವಿವಿಧ ಬ್ಯಾಂಕ್ಗಳಲ್ಲಿ ನಡೆದ ಮತ್ತೊಂದು ವಂಚನೆ ಪ್ರಕರಣ ಇದೀಗ ಬೆಳಕಿಗೆ ಬಂದಿದ್ದು, ತನಿಖೆ ನಡೆಸುವಂತೆ ಸಿಬಿಐಗೆ ಎಸ್ಬಿಐ ಬ್ಯಾಂಕ್ ದೂರು ಸಲ್ಲಿಸಿದೆ.
ವಿವಿಧ ಬ್ಯಾಂಕ್ಗಳಲ್ಲಿ ಬರೋಬ್ಬರಿ 414 ಕೋಟಿ ರೂ. ಸಾಲ ಮಾಡಿ 2016ರಿಂದಲೂ ಬಾಸ್ಮತಿ ರೈಸ್ ರಫ್ತುದಾರ ರಾಮ್ದೇವ್ ನಾಪತ್ತೆಯಾಗಿದ್ದಾಗಿ ಬ್ಯಾಂಕ್ ತಿಳಿಸಿದೆ. ಪಶ್ಚಿಮ ಏಷ್ಯಾ ಮತ್ತು ಯುರೋಪಿಯನ್ ದೇಶಗಳಿಗೆ ಬಾಸ್ಮತಿ ಅಕ್ಕಿ ರಫ್ತು ಮಾಡುವ ಕಂಪನಿಯ ನಿರ್ದೇಶಕರಾದ ನರೇಶ್ ಕುಮಾರ್, ಸುರೇಶ್ ಕುಮಾರ್ ಮತ್ತು ಸಂಗಿತಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು.
ಇವರು ವಿವಿಧ ಬ್ಯಾಂಕ್ಗಳಲ್ಲಿ ಒಟ್ಟು 414 ಕೋಟಿ ರೂ ಸಾಲ ಮಾಡಿದ್ದು, ಇದರಲ್ಲಿ 173 ಕೋಟಿ ರೂ ಎಸ್ಬಿಐ, 76 ಕೋಟಿ ರೂ ಕೆನರಾ ಬ್ಯಾಂಕ್, 64 ಕೋಟಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, 51 ಕೋಟಿ ರೂ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಕಾರ್ಪೊರೇಷನ್ ಬ್ಯಾಂಕ್ನಲ್ಲಿ 36 ಕೋಟಿ ರೂ ಹಾಗೂ ಐಡಿಬಿಐ ಬ್ಯಾಂಕ್ನಲ್ಲಿ 12 ಕೋಟಿ ರೂ ಸಾಲ ಪಡೆದುಕೊಂಡಿದ್ದರು.
2016ರಲ್ಲಿ ಕಂಪನಿ ರಿಜಿಸ್ಟರ್ ಮಾಡಿದ್ದ ಇವರು ತದನಂತರ ಕಾಣೆಯಾಗಿದ್ದು, ಇಲ್ಲಿಯವರೆಗೆ ಕಾಣಿಸಿಕೊಂಡಿಲ್ಲ ಎಂದು ತಿಳಿಸಿದೆ. ಇನ್ನು ಎಸ್ಬಿಐ ನೀಡಿರುವ ದೂರಿನ ಆಧಾರದ ಮೇಲೆ ಸಿಬಿಐ ಪ್ರಕರಣ ದಾಖಲು ಮಾಡಿಕೊಂಡಿದ್ದಾಗಿ ತಿಳಿದು ಬಂದಿದೆ.