ನವದೆಹಲಿ: ಎರಿಕ್ಸನ್ ಸಂಸ್ಥೆಗೆ ಅನಿಲ್ ಅಂಬಾನಿ ಕೊನೆಗೂ 458.7 ಕೋಟಿ ಬಾಕಿ ಪಾವತಿ ಮಾಡಿ ಬಂಧನದಿಂದ ಪಾರಾಗಿದ್ದಾರೆ.
ಸಾಲದ ಸುಳಿಯಲ್ಲಿ ಸಿಲುಕಿದ್ದ ಅನಿಲ್ ಅಂಬಾನಿ ಬಾಕಿ ಪಾವತಿಗೆ ಅಣ್ಣ ಮುಖೇಶ್ ಅಂಬಾನಿ ಸಹಾಯ ಮಾಡಿದ್ದಾರೆ. ಈ ಸಹಾಯಕ್ಕೆ ಅನಿಲ್ ಅಂಬಾನಿ ಖುಷಿ ವ್ಯಕ್ತಪಡಿಸಿದ್ದಾರೆ.
"ನನ್ನ ಅಣ್ಣ ಮುಖೇಶ್ ಅಂಬಾನಿ ಹಾಗೂ ನೀತಾ ಅವರಿಗೆ ಧನ್ಯವಾದಗಳು. ನನ್ನ ಕಷ್ಟಕಾಲದಲ್ಲಿ ಬೆನ್ನೆಲುಬಾಗಿ ನಿಂತಿದ್ದು ಖುಷಿ ನೀಡಿದೆ. ಇದು ಕುಟುಂಬದ ಮೌಲ್ಯವನ್ನು ತೋರಿಸಿದೆ. ನನ್ನ ಕುಟುಂಬ ಜೀವನಪೂರ್ತಿ ಋಣಿಯಾಗಿರುತ್ತೇವೆ" ಎಂದು ಬಾಕಿ ಪಾವತಿ ಬಳಿಕ ಆರ್.ಕಾಮ್ ವಕ್ತಾರರು ಹೇಳಿಕೆ ನೀಡಿದ್ದಾರೆ.
ಎರಿಕ್ಸನ್ ಕಂಪೆನಿಗೆ 458.7 ಕೋಟಿ ಹಣವನ್ನು ಪಾವತಿ ಮಾಡಿ ಇಲ್ಲವೇ ಜೈಲಿಗೆ ಹೋಗಿ ಎಂದು ಸುಪ್ರೀಂ ಕೋರ್ಟ್ ಖಡಕ್ಕಾಗಿ ಹೇಳಿ ಗಡುವನ್ನೂ ನೀಡಿತ್ತು. ಈ ಗಡುವು ಮುಕ್ತಾಯದ ಒಂದು ದಿನ ಮುಂಚಿತವಾಗಿ ಅನಿಲ್ ಅಂಬಾನಿ ಬಾಕಿ ಪಾವತಿ ಮಾಡಿ ನಿಟ್ಟುಸಿರು ಬಿಟ್ಟಿದ್ದಾರೆ.
ಏನಿದು ಪ್ರಕರಣ..?
2013ರಲ್ಲಿ ಆರ್ಕಾಮ್ ಜೊತೆಗೆ ಎರಿಕ್ಸನ್ ಕಂಪೆನಿ ಒಪ್ಪಂದ ಮಾಡಿಕೊಂಡು 1600 ಕೋಟಿ ನೀಡುವಲ್ಲಿ ವಿಫಲವಾಗಿತ್ತು. 2017ರಲ್ಲಿ ಈ ವಿಚಾರ ಸುಪ್ರೀಂ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ಕೋರ್ಟ್ 458 ಕೋಟಿಯನ್ನು ತಕ್ಷಣವೇ ನೀಡುವಂತೆ ಗಡುವು ವಿಧಿಸಿ ಆದೇಶ ಹೊರಡಿಸಿತ್ತು.