ಚಿತ್ತೂರು: ಕೊರೊನಾ ವೈರಸ್ ಸೋಂಕಿತ ತಾಯಿಯ ಹತ್ತಿರ 17 ದಿನಗಳ ಕಾಲ ಇದ್ದರೂ ಒಂದೂವರೆ ವರ್ಷದ ಮಗುವಿಗೆ ಸೋಂಕು ತಗುಲದಿರುವುದು ಅಚ್ಚರಿಗೆ ಕಾರಣವಾಗಿದೆ.
ಮಗುವಿನ ತಾಯಿಯಲ್ಲಿ ಕೊರೊನಾ ಸೋಂಕು ದೃಢಪಟ್ಟ ನಂತರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌ಗೆ ದಾಖಲಿಸಲಾಯಿತು. ಒಂದೂವರೆ ವರ್ಷದ ತನ್ನ ಮಗನನ್ನು ನೋಡಿಕೊಳ್ಳಲು ಆಕೆಯ ಕುಟುಂಬದಿಂದ ಯಾರೂ ಮುಂದೆ ಬರಲಿಲ್ಲವಾದ್ದರಿಂದ ಅಧಿಕಾರಿಗಳು ಆಕೆ ಜೊತೆ ಮಗು ಇರಲು ಅವಕಾಶ ಮಾಡಿ ಕೊಟ್ಟರು.
ತಾಯಿ ಮತ್ತು ಮಗ ಇಬ್ಬರನ್ನೂ ವೈದ್ಯಕೀಯ ಸಿಬ್ಬಂದಿ ಆಗಾಗ್ಗೆ ತಪಾಸಣೆ ನಡೆಸುತ್ತಿದ್ದರು. ಮಗುವನ್ನು ಮುಟ್ಟುವಾಗ ಯಾವೆಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ತಾಯಿಗೆ ವಿವರಿಸಲಾಗಿತ್ತು. ಇದರ ಪರಿಣಾಮವಾಗಿ ಮಗುವಲ್ಲಿ 17 ದಿನಗಳ ನಂತರವೂ ಸೋಂಕು ಪತ್ತೆಯಾಗಿಲ್ಲ.
ಇದು ವೈದ್ಯರನ್ನೇ ಆಶ್ಚರ್ಯಚಕಿತರನ್ನಾಗಿಸಿದೆ. ಕೊರೊನಾ ವೈರಸ್‌ಗೆ ಪ್ರತಿರೋಧ ಒಡ್ಡಬಲ್ಲ ಶಕ್ತಿ ಮಗುವಿನ ರಕ್ತ ಹೊಂದಿದೆ ಎಂಬ ಮಾಹಿತಿಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ ತಿಳಿಸಲು ಜಿಲ್ಲಾಸ್ಪತ್ರೆ ವೈದ್ಯರು ನಿರ್ಧರಿಸಿದ್ದಾರೆ.