ಅಮರಾವತಿ: ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ವೈ ಎಸ್ ಜಗನ್ಮೋಹನ್ ರೆಡ್ಡಿ ಅವರು, ತಮ್ಮ ಹಿಟ್ ಲಿಸ್ಟ್ನಲ್ಲಿದ್ದ ಅಧಿಕಾರಿಗಳನ್ನು ವರ್ಗಾವಣೆಗೊಳಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಗುರುವಾರ ರಾತ್ರಿ ರಾಜ್ಯದ ಪೊಲೀಸ್ ಮಹಾನಿರ್ದೇಶಕ ಆರ್ಪಿ ಠಾಕೂರ್ ಅವರನ್ನು ಸ್ಥಾನದಿಂದ ವರ್ಗಾವಣೆ ಮಾಡಿರುವುದು ಇಂತಹ ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೆ, ಭ್ರಷ್ಟಾಚಾರ ನಿಗ್ರಹ ಪಡೆಯ ಡಿಜಿ ಆಗಿದ್ದ ಎ.ಬಿ. ವೆಂಕಟೇಶ್ವರ ರಾವ್ ಅವರನ್ನು ಸಹ ವರ್ಗಾವಣೆ ಮಾಡಲಾಗಿದೆ.
ಠಾಕೂರ್ ಹಾಗೂ ರಾವ್ ಅವರು ವೈಎಸ್ಆರ್ ಕಾಂಗ್ರೆಸ್ನ ಹಿಟ್ ಲಿಸ್ಟ್ನಲ್ಲಿದ್ದರು. ಈ ಮೊದಲು ಅಧಿಕಾರದಲ್ಲಿದ್ದ ತೆಲುಗು ದೇಶಂ ಪಕ್ಷಕ್ಕೆ ಹತ್ತಿರವಿದ್ದ ಕಾರಣ ಹಲವು ಬಾರಿ ಇವರ ವಿರುದ್ಧ ಇಸಿಐ ಹಾಗೂ ಇತರೆ ಪ್ರಾಧಿಕಾರಗಳಿಗೆ ವೈಎಸ್ಆರ್ ಕಾಂಗ್ರೆಸ್ನಿಂದ ದೂರು ನೀಡಲಾಗಿತ್ತು. ಇದೀಗ ಜಗನ್ ಈ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿ, ಸೇಡು ತೀರಿಸಿಕೊಳ್ತಿದ್ದಾರೆ ಎನ್ನಲಾಗ್ತಿದೆ.
ಠಾಕೂರ್ ಬದಲು ದಾಮೋದರ್ ಗೌತಮ್ ಸವಾಂಗ್ ಎಂಬುವರಿಗೆ ಹೆಚ್ಚುವರಿ ಡಿಜಿಪಿ ಹುದ್ದೆ ನೀಡಲಾಗಿದೆ. ಠಾಕೂರ್ ಅವರನ್ನು ಮುದ್ರಣ ಹಾಗೂ ಉಗ್ರಾಣ ವಿಭಾಗದ ಕಮಿಷನರ್ ಆಗಿ ವರ್ಗಾವಣೆ ಮಾಡಲಾಗಿದೆ. ಈ ಬಗ್ಗೆ ಸರ್ಕಾರದ ಕಾರ್ಯದರ್ಶಿ ಎಲ್.ವಿ. ಸುಬ್ರಹ್ಮಣ್ಯ ಆದೇಶ ಹೊರಡಿಸಿದ್ದಾರೆ.