ಚಿತ್ತೂರ್(ಆಂಧ್ರಪ್ರದೇಶ): ಮಹಾಮಾರಿ ಕೊರೊನಾ ವೈರಸ್ ಚೀನಾದಲ್ಲಿ ರೌದ್ರತಾಂಡವ ಆಡ್ತಿದ್ದು, ಈಗಾಗಲೇ 1,100ಕ್ಕೂ ಹೆಚ್ಚು ಅಮಾಯಕ ಜೀವಗಳ ಬಲಿ ಪಡೆದುಕೊಂಡಿದೆ. ಇದರ ಮಧ್ಯೆ ಭಾರತದಲ್ಲೂ ಅಲ್ಲೊಂದು ಇಲ್ಲೊಂದು ಪ್ರಕರಣಗಳು ಕಾಣಸಿಗ್ತಿವೆ.
ಇದೀಗ ಆಂಧ್ರಪ್ರದೇಶದ ಚಿತ್ತೂರ್ನಲ್ಲಿ ವ್ಯಕ್ತಿಯೊಬ್ಬ ತನಗೆ ಕೊರೊನಾ ವೈರಸ್ ಇದೆ ಎಂದು ತಪ್ಪಾಗಿ ಭಾವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 54 ವರ್ಷದ ವ್ಯಕ್ತಿಯೊಬ್ಬ ಆಸ್ಪತ್ರೆಗೆ ತೆರಳಿದ್ದು, ಈ ವೇಳೆ ವೈದ್ಯರು ಮಾಸ್ಕ್ ಹಾಕಿಕೊಂಡು ಹೊರಗಡೆ ನಡೆದಾಡುವಂತೆ ಆತನಿಗೆ ಸೂಚನೆ ನೀಡಿದ್ದಾರೆ. ಇಷ್ಟಕ್ಕೆ ತನಗೆ ಕೊರೊನಾ ಇದೆ ಎಂದು ಭಾವಿಸಿದ್ದು, ಈ ಸೋಂಕು ಗ್ರಾಮದ ಇತರರಿಗೆ ಬರಬಾರದು ಎಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.
ಡಾಕ್ಟರ್ ಹೇಳಿರುವ ಪ್ರಕಾರ ಆತನಿಗೆ ಕೊರೊನಾ ವೈರಸ್ ಇರಲಿಲ್ಲ. ಜ್ವರ ಹಾಗೂ ಕೆಮ್ಮು ಇದ್ದ ಕಾರಣ ಬೇರೆ ಸೋಂಕು ಆತನಿಗೆ ಬರಬಾರದು ಎಂಬ ಉದ್ದೇಶದಿಂದ ಮಾಸ್ಕ್ ಹಾಕಿಕೊಂಡು ಹೊರಗಡೆ ನಡೆದಾಡುವಂತೆ ಮಾಹಿತಿ ನೀಡಿದ್ದೆವು ಎಂದು ವೈದ್ಯರು ತಿಳಿಸಿದ್ದಾರೆ.