ನವದೆಹಲಿ : ಮುಂದಿನ 6 ಗಂಟೆಗಳಲ್ಲಿ ಆಂಫಾನ್ ಚಂಡಮಾರುತ ಇನ್ನಷ್ಟು ಉಗ್ರ ಸ್ವರೂಪ ತಾಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಐಎಂಡಿ, ಬಂಗಾಳ ಕೊಲ್ಲಿಯ ದಕ್ಷಿಣದ ಮಧ್ಯ ಭಾಗದಲ್ಲಿ ಅಕ್ಷಾಂಶ 12.5 ಡಿಗ್ರಿ, ರೇಖಾಂಶ 86.4 ಡಿಗ್ರಿ. ಪೂರ್ವದಲ್ಲಿ ಒಡಿಶಾದ ಪ್ಯಾರಾಡಿಪ್ನಿದಿಂದ ದಕ್ಷಿಣಕ್ಕೆ ಸುಮಾರು 870 ಕಿ.ಮೀ ದೂರದಲ್ಲಿ ಆಂಫಾನ್ ಚಂಡಮಾರುತ ಬೀಸುವ ಸಾಧ್ಯತೆಯಿದೆ. ಪಶ್ಚಿಮ ಬಂಗಾಳದ ದಿಗಾ ಮತ್ತು ಬಾಂಗ್ಲಾದೇಶದ ಹತಿಯಾ ದ್ವೀಪಗಳ ನಡುವೆ ಮೇ 20 ರ ಮಧ್ಯಾಹ್ನದಿಂದ ಸಂಜೆಯೊಳಗೆ ಆಂಫಾನ್ ಹಾದು ಹೋಗಲಿದೆ ಎಂದು ತಿಳಿಸಿದೆ.
ಆಂಫಾನ್ ಪರಿಣಾಮ ಕಿಯೋಂಜಿಹಾರ್ ಜಿಲ್ಲೆಯ ಜಂಪುರ, ಪಾಟ್ನಾ, ಸಹರ್ಪದ ಮತ್ತು ಚಂಪುವಾ ಬ್ಲಾಕ್ ಮತ್ತು ಮಯೂರ್ಭಂಜ್ ಜಿಲ್ಲೆಯ ಸುಕ್ರುಲಿ, ರರುವಾನ್ ಮತ್ತು ಕರಾಜಿಯಾ ಬ್ಲಾಕ್‌ಗಳಲ್ಲಿ ಗುಡುಗ, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಒಡಿಶಾ ಸರ್ಕಾರದ ವಿಶೇಷ ಪರಿಹಾರ ತಂಡ ಮುನ್ನೆಚ್ಚರಿಕೆ ನೀಡಿದೆ.
ಈ ಮಧ್ಯೆ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆ( ಎನ್ಡಿಆರ್ಎಫ್)ಯ 10 ತಂಡಗಳನ್ನು ಒಡಿಶಾಗೆ ಮತ್ತು 7 ತಂಡಗಳನ್ನು ಪ. ಬಂಗಾಳಕ್ಕೆ ಕಳುಹಿಸಿದೆ.