ಕೋಲ್ಕತ್ತಾ/ಭುವನೇಶ್ವರ್: ಮಹಾಮಾರಿ ಕೊರೊನಾ ಅಟ್ಟಹಾಸದ ಮಧ್ಯೆ ರಕ್ಕಸ ಅಂಫಾನ್ ಚಂಡಮಾರುತ ತನ್ನ ರೌದ್ರನರ್ತನ ಮುಂದುವರಿಸಿದೆ. ಈ ರಕ್ಕಸ ಚಂಡಮಾರುತದ ಹೊಡೆತಕ್ಕೆ ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳು ಸೇರಿದಂತೆ ಬಾಂಗ್ಲಾದೇಶ ಕೂಡ ನಲುಗಿದೆ. ಈವರೆಗೆ ಪಶ್ಚಿಮ ಬಂಗಾಳದಲ್ಲಿ ಚಂಡಮಾರುತಕ್ಕೆ ಸಿಲುಕಿ 72 ಮಂದಿ ಸಾವನ್ನಪ್ಪಿದ್ದಾರೆ.
ಅಂಫಾನ್ ಚಂಡಮಾರುತ ತೀವ್ರ ವೇಗದಲ್ಲಿ ಬೀಸುತ್ತಿದ್ದು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಗಿದೆ. ಅಲ್ಲಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜನತೆ ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ. ಈವರೆಗೆ 72 ಜನರನ್ನು ಬಲಿ ತೆಗೆದುಕೊಂಡಿದ್ದು, ಕೋಲ್ಕತ್ತಾ ಸೇರಿ ಪಶ್ಚಿಮ ಬಂಗಾಳದ ಹಲವು ಭಾಗಗಳಲ್ಲಿ ಭಾರಿ ಹಾನಿಯಾಗಿದೆ.
ವರದಿಗಳ ಪ್ರಕಾರ, ಶಾಲಿಮಾರ್ನಲ್ಲಿ ಗೋಡೆ ಕುಸಿದು ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಇನ್ನು ಮರಗಳು ಧರೆಗುಳಿದ ಪರಿಣಾಮ ನಾರ್ಥ್ 24 ಪರಗಣ ಜಿಲ್ಲೆಯ ಮಿನಾಖಾನ್ ಪ್ರದೇಶದಲ್ಲಿ 56 ವರ್ಷದ ಮಹಿಳೆ ಹಾಗೂ ಬಸಿರ್ಹತ್ನಲ್ಲಿ ಯುವಕ ಸಾವನ್ನಪ್ಪಿದ್ದಾರೆ. ಇನ್ನು ದಕ್ಷಿಣ ಕೋಲ್ಕತ್ತಾದ ರೀಜೆಂಟ್ ಪಾರ್ಕ್ ಪ್ರದೇಶದಲ್ಲಿ ತಾಯಿ-ಮಗ ಬಲಿಯಾಗಿದ್ದಾರೆ. ಹೀಗೆ ಅಲ್ಲಲ್ಲಿ ಸಾವು-ನೋವು ಸಂಭವಿಸಿದೆ.
ಚಂಡಮಾರುತದಿಂದಾಗಿ ಸುಮಾರು 50 ಸಾವಿರಕ್ಕೂ ಮನೆಗಳು ಸೇರಿದಂತೆ ರಾಜ್ಯ ಸಚಿವಾಲಯ ಕಟ್ಟಡಕ್ಕೂ ಸಹ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ಮಾತನಾಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿರುಗಾಳಿಯಿಂದಾಗಿ ಸಂಪರ್ಕಗಳೆಲ್ಲಾ ಕಡಿತಗೊಂಡಿದ್ದರಿಂದ ನಮಗೆ ಸರಿಯಾದ ವರದಿ ಸಿಗುತ್ತಿಲ್ಲ. ಆದರೆ ಅಪಾರ ಪ್ರಮಾಣದ ಸಾವು-ನೋವು ಸಂಭವಿಸಿದ್ದು, ಸೈಕ್ಲೋನ್ಗೆ ಬಲಿಯಾದವರ ಸಂಖ್ಯೆಯು ರಾಜ್ಯದಲ್ಲಿ ಕೋವಿಡ್ -19 ನಿಂದ ಮೃತಪಟ್ಟಿರುವವರ ಸಂಖ್ಯೆಯನ್ನೂ ಮೀರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು, ಕೋಲ್ಕತ್ತಾದ ವಿಮಾನ ನಿಲ್ದಾಣ ರಸ್ತೆಯಲ್ಲಿ ಹಾಗೂ ವಿವಿಧೆಡೆ ರಸ್ತೆ ತೆರವು ಕಾರ್ಯಾಚರಣೆ ಹಾಗೂ ದುರಸ್ತಿ ಕಾರ್ಯವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸಿಬ್ಬಂದಿ ಮುಂದುವರೆಸಿದ್ದಾರೆ ಎಂದು NDRF ಮುಖ್ಯಸ್ಥ ಎಸ್.ಎನ್. ಪ್ರಧಾನ್ ಹೇಳಿದ್ದಾರೆ.
ರಕ್ಕಸ ಅಂಫಾನ್ ಚಂಡಮಾರುತ ಒಡಿಶಾಕ್ಕೂ ಅಪ್ಪಳಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಗಿದೆ. ಇನ್ನು, ಚಂಡಮಾರುತದ ರಭಸಕ್ಕೆ ಶಾಲೆಯೊಂದರ ಶೀಟ್ ಹಾರಿಹೋಗಿದೆ. ನಿನ್ನೆ ಮನೆಯ ಗೋಡೆ ಕುಸಿದ ಪರಿಣಾಮ ಮೂರು ತಿಂಗಳ ಹಸುಗೂಸೊಂದು ಸಾವನ್ನಪ್ಪಿದೆ.